ಬೀದರ್ | ಜನಪದ ಸಂಸ್ಕೃತಿ ಎಲ್ಲರ ಉಸಿರಾಗಲಿ : ಪ್ರೊ. ಜಗನ್ನಾಥ ಹೆಬ್ಬಾಳೆ

ಬೀದರ್ : ಜನಪದ ಸಂಸ್ಕೃತಿ ಪ್ರತಿಯೊಬ್ಬರು ತಮ್ಮ ಬದುಕಿನ ಉಸಿರಾಗಿ ಮಾರ್ಪಡಿಸಿಕೊಂಡರೆ ಅವರವರ ಬದುಕು ಹಸನಾಗುತ್ತದೆ ಎಂದು ಕಲಾವಿದರ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರೊ. ಜಗನ್ನಾಥ್ ಹೆಬ್ಬಾಳೆ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಘೋಡಂಪಳ್ಳಿಯ ಪ.ಪೂ ಕಾಲೇಜಿನ ಸಹಕಾರದೊಂದಿಗೆ ಆಯೋಜಿಸಿದ ಶಾಲಾ ಕಾಲೇಜಿಗೊಂದು ಜಾನಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾನಪದ ಸಂಸ್ಕೃತಿ ಮಾನವನ ಸಂಬಂಧಗಳನ್ನು ಗಟ್ಟಿಗೊಳಿಸಿ, ಭಾವೈಕ್ಯತೆ ಮೂಡಿಸುತ್ತದೆ. ಬಹುತ್ವದಿಂದ ಬಾಳಬೇಕೆಂದು ಹೇಳುತ್ತದೆ. ಚಾರಿತ್ರಿಕ ಅಂಶಗಳನ್ನು ಪ್ರತಿಬಿಂಬಿಸುವುದರ ಮೂಲಕ ದಲಿತ ಬಲಿತ ಎನ್ನುವುದಿಲ್ಲ. ರಾಮ್, ರಹೀಮ್, ಅಲ್ಲಾ ಹಾಗೂ ಶಿವಾ ಎನ್ನುವ ಹೆಸರು ಬೇರೆ ಬೇರೆಯಾದರೂ ದೇವರು ಮಾತ್ರ ಒಂದೇ ಎಂಬ ಅರ್ಥ ಕೊಡುತ್ತದೆ ಎಂದರು.
ಸರಕಾರಿ ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ದೇವೇಂದ್ರ ಹಂಚೆ ಅವರು ಮಾತನಾಡಿ, ಸೂಫಿ ಸಂತರು, ತತ್ವಪದಕಾರರು ಸಾಮರಸ್ಯದ ಬದಕನ್ನು ಕಟ್ಟಿಕೊಂಡು ತತ್ವಪದಗಳು ರಚಿಸಿ ಸುಂದರ ಸಮಾಜವನ್ನು ನಿರ್ಮಿಸಿದ್ದಾರೆ. ಮೊಹರಂ ಹಬ್ಬ ಹಿಂದೂ ಮತ್ತು ಮುಸ್ಲಿಮರು ಕೂಡಿ ಆಚರಿಸುತ್ತಾರೆ. ರಮಝಾನ್ ಹಬ್ಬದಂದು ಈದ್ ಮುಬಾರಕ್ ಹೇಳುವುದಕ್ಕೆ ಮನೆ ಮನೆಗೆ ಹೋಗಿ, ಸುರ್‌ಕುಂಭ ಸೇವಿಸಿ ಸೌಹಾರ್ದತೆಯ ನೆಲೆಯನ್ನು ನಿರ್ಮಿಸುತ್ತಾರೆ. ಅಂತಹ ಶಕ್ತಿ ಜನಪದ ಸಂಸ್ಕೃತಿಗೆ ಇದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನ ಪ್ರಾಂಶುಪಾಲ ಶರಣಪ್ಪ ಬಿರಾದಾರ್, ಕರ್ನಾಟಕ ಜಾನಪದ ಪರಿಷತ್ತಿನ ಬೀದರ್ ತಾಲೂಕ್ ಘಟಕದ ಅಧ್ಯಕ್ಷ ಎಸ್.ಬಿ. ಕುಚಬಾಳ್, ಉಪ ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ, ಪ್ರಾಧ್ಯಾಪಕ ರಮೇಶ್ ಬೋಸ್ಲೆ, ವೈಜಿನಾಥ್ ಚಿಕಬಸೆ, ಶಿವಶರಣಪ್ಪ ಗಣೇಶಪುರ್, ಸಂಗೀತಾ ಕಾಂಬಳೆ, ಡಾ. ರಾಜಕುಮಾರ್ ಹೆಬ್ಬಾಳೆ, ನಿಜಲಿಂಗಪ್ಪ ತಗಾರೆ ಹಾಗೂ ಉಪನ್ಯಾಸಕ ಜೋಷಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







