ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ: ಶಾಸಕ ಡಾ.ಸಿದ್ಧು ಪಾಟೀಲ್
ಹುಮನಾಬಾದ್‌ನಲ್ಲಿ ಕಲ್ಯಾಣ ಕರ್ನಾಟಕ ಉತ್ಸವ, ವಿಶ್ವಕರ್ಮ ಜಯಂತಿ ಆಚರಣೆ; ವಿಮೋಚನಾ ಹೋರಾಟಗಾರರಿಗೆ ಗೌರವ ನಮನ

ಹುಮನಾಬಾದ್: ಮಹಾನ್ ಸಾಧಕರ ಪುಣ್ಯಭೂಮಿ ಹಾಗೂ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ನೆಲೆಯಾಗಿರುವ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಶಾಸಕ ಡಾ. ಸಿದ್ಧು ಪಾಟೀಲ್ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ವಿಶ್ವಕರ್ಮ ಜಯಂತೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕವೂ ಹೈದರಾಬಾದ್ ಸಂಸ್ಥಾನದ ಜನರಿಗೆ ನಿಜಾಮರ ದಬ್ಬಾಳಿಕೆ ಮತ್ತು ರಜಾಕಾರರ ಕ್ರೂರ ದೌರ್ಜನ್ಯದಿಂದ ಮುಕ್ತಿ ಸಿಕ್ಕಿರಲಿಲ್ಲ. ಈ ದಬ್ಬಾಳಿಕೆಯನ್ನು ವಿರೋಧಿಸಿ ನಾಡಿನ ವಿಮೋಚನೆಗಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರಿಗೆ ಗೌರವ ನಮನ ಸಲ್ಲಿಸುವುದಾಗಿ ಹೇಳಿದರು.
1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟದಲ್ಲಿ ವಿಲೀನಗೊಳ್ಳಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಢ ನಿರ್ಧಾರ ಮತ್ತು ದೂರದೃಷ್ಟಿಯ ನಾಯಕತ್ವ ಪ್ರಮುಖ ಕಾರಣವಾಗಿದೆ. ಆ ದಿನದಿಂದ ಈ ಭಾಗದ ಜನರಿಗೆ ನಿಜವಾದ ಸ್ವಾತಂತ್ರ್ಯದ ಬೆಳಕು ದೊರೆಯಿತು ಎಂದು ಶಾಸಕ ಸಿದ್ಧು ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಗದೀಶ್ ಚೌರ್, ತಾಲೂಕು ಪಂಚಾಯತ್ ಇಓ ದೀಪಿಕಾ ನಾಯ್ಕರ್, ಪುರಸಭೆ ಮುಖ್ಯಧಿಕಾರಿ ವನಿತಾ, ಪ್ರಮುಖರಾದ ಬಸವರಾಜ್ ಆರ್ಯ, ಸುಭಾಷ್ ಆರ್ಯ, ಶಿವಲಿಂಗ ಸ್ವಾಮಿ, ಶಿವಕುಮಾರ್ ಭೂರಿ, ನಾರಾಯಣ ಚಿದ್ರಿ, ಮಲ್ಲಿಕಾರ್ಜುನ್ ಸಿಗಿ, ಮಣಿರೆಡ್ಡಿ, ಸುನಿಲ್ ಪತ್ರಿ, ಸಂತೋಷ್ ಯಾದವ್ ಹಾಗೂ ಗೋಪಾಲಕೃಷ್ಣ ಮೋಹಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






