ಮಹರ್ಷಿ ವಾಲ್ಮೀಕಿ ಅವರ ತತ್ವ ಬದುಕಿನಲ್ಲಿ ಪಾಲಿಸಿ : ಡಿಸಿ ಶಿಲ್ಪಾ ಶರ್ಮಾ

ಬೀದರ್ : ಅಕ್ಷರ ಜ್ಞಾನ ಮತ್ತು ಸನ್ಮಾರ್ಗದ ಬೆಳಕನ್ನು ಸಮಾಜಕ್ಕೆ ನೀಡಿದ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಹಾಗೂ ಮೌಲ್ಯಗಳು ಸಾರ್ವಕಾಲಿಕವಾಗಿ ಪ್ರಸ್ತುತವಾಗಿವೆ. ಪ್ರತಿಯೊಬ್ಬರೂ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರ ತಪಸ್ಸು ಮತ್ತು ಸಾಧನೆ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ. ಪರಿವರ್ತನೆ ಎಂಬುದು ಯಾರಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಸಾಧ್ಯ ಎಂಬುದಕ್ಕೆ ಅವರ ಜೀವನವೇ ಸಾಕ್ಷಿ. ಸಮಾಜದ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣದಿಂದ ಮಾತ್ರ ಸಮಾನತೆ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯವು ಕೇವಲ ಧಾರ್ಮಿಕ ಗ್ರಂಥವಲ್ಲ; ಅದು ಮಾನವೀಯ ಮೌಲ್ಯಗಳ ಸಾಗರವಾಗಿದೆ. ತಂದೆ-ತಾಯಿ, ಸಹೋದರರು ಮತ್ತು ಸಮಾಜದೊಂದಿಗಿನ ಬಾಂಧವ್ಯ ಹೇಗಿರಬೇಕು ಎಂಬುದನ್ನು ಅದು ತಿಳಿಸಿಕೊಡುತ್ತದೆ. ಸಮಾಜದಲ್ಲಿದ್ದ ಅಜ್ಞಾನ ದೂರಗೊಳಿಸಿ ಜ್ಞಾನದ ದೀವಿಗೆ ಹಚ್ಚಿದ ವಾಲ್ಮೀಕಿಯವರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಅವರ ಆಶಯಗಳನ್ನು ದೈನಂದಿನ ಜೀವನದಲ್ಲಿ ಪಾಲಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್, ಎಸ್ಪಿ ಪ್ರದೀಪ್ ಗುಂಟಿ, ಸಹಾಯಕ ಆಯುಕ್ತ ಅಭಿನವ್ ಜೈನ್, ಅಪರ ಜಿಲ್ಲಾಧಿಕಾರಿ ಸುರೇಖಾ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ್ ಜಮಾದಾರ್, ಪಂಡಿತರಾವ್ ಚಿದ್ರಿ, ಸುನೀಲ್ ಭಾವಿಕಟ್ಟಿ, ಸುನೀಲ್ ಖಾಸೆಂಪುರ್, ಮಾರುತಿ ಮಾಸ್ಟರ್, ಶರಣಪ್ಪ ಶಾಸೆಂಪುರ್, ಶಣ್ಮುಖಪ್ಪಾ ಶೇಕಾಪೂರ್, ರಾಜಕುಮಾರ್ ಕರ್ಣೆ, ಪ್ರಕಾಶ್ ಬಾಪನೋರ್, ಮಾಣಿಕ್ ನೇಳಗಿ ಹಾಗೂ ಶಿವರಾಜ್ ಜಾಗಿರದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.






