ರೈತರ ಬೇಡಿಕೆ ಈಡೇರದಿದ್ದರೆ ಅ.13ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ : ಮಹೇಶಗೌಡ ಸುಬೇದಾರ್ ಎಚ್ಚರಿಕೆ

ಬೀದರ್ : ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿ ಹಾಗೂ ತಮ್ಮ ಇತರ ಬೇಡಿಕೆಗಳು ಈಡೇರಿಕೆಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ನೇತೃತ್ವದಲ್ಲಿ ಅ.12ರಂದು ದೆಹಲಿಯಲ್ಲಿ ರೈತರ ಸಭೆ ನಡೆಸಲು ತಿರ್ಮಾನಿಸಲಾಗಿದೆ. ಈ ಸಭೆಯಲ್ಲಿ ರೈತರ ಬೇಡಿಕೆಗಳು ಈಡೇರದಿದ್ದರೆ ಅ.13 ರಂದು ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಎಂ. ಸುಬೇದಾರ್ ಅವರು ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆ.29 ರಂದು ಹುಬ್ಬಳ್ಳಿಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಆ ಪ್ರತಿಭಟನೆಗೆ ಮಣಿದ ಜನಪ್ರತಿನಿಧಿಗಳು ದೆಹಲಿಯಲ್ಲಿ ರೈತರ ಜೊತೆಗೆ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿ ಟನ್ ಕಬ್ಬಿಗೆ 5,500 ರೂ. ಎಫ್‌ಆರ್‌ಪಿ ದರವನ್ನು ನಿಗದಿ ಮಾಡಬೇಕು. ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ರೈತರಿಗೆ ಅನುಕೂಲವಾಗುವಂತೆ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ನಿರಂತರವಾಗಿ 10 ರಿಂದ 12 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಹಳೆಯ ಬಾಕಿ ಹಣವನ್ನು ಕಡ್ಡಾಯವಾಗಿ 14 ದಿನಗಳ ಒಳಗಾಗಿ ಪಾವತಿಸಬೇಕು. ಕಬ್ಬಿಗೆ ಸೂಕ್ತ ಬೆಲೆ ನಿಗದಿಯಾಗುವವರೆಗೆ ಯಾವುದೇ ಸಕ್ಕರೆ ಕಾರ್ಖಾನೆಗಳು ಕಾರ್ಯಾಚರಣೆ ಆರಂಭಿಸಬಾರದು ಎಂದು ಆಗ್ರಹಿಸಿದ ಅವರು, ರೈತರು ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಬಾರದು ಎಂದು ಕರೆ ನೀಡಿದರು.
ಕಬ್ಬು ಕಟಾವು ಮಾಡಿದ ನಂತರ 14 ದಿನಗಳ ಒಳಗಡೆ ರೈತರಿಗೆ ಹಣ ಪಾವತಿ ಮಾಡಬೇಕು. ಹಣ ಪಾವತಿ ವಿಳಂಬವಾದಲ್ಲಿ ಶೇ.15 ರಷ್ಟು ಬಡ್ಡಿ ಸಮೇತ ರೈತರಿಗೆ ಹಣ ನೀಡಬೇಕು. ಕಬ್ಬಿನಿಂದ ಕೇವಲ ಸಕ್ಕರೆ ಮಾತ್ರವಲ್ಲ ಉಪ ಉತ್ಪನ್ನಗಳಾದ ಎಥನಾಲ, ಮೂಲಾಸೆಸ್, ಪ್ರಾಸ್‌ಮೆಟ್ (ಕಬ್ಬಿನ ತ್ಯಾಜ್ಯ) ಬಗ್ಯಾಸೆಸ್ ಇವುಗಳಿಂದಲೂ ಕಾರ್ಖಾನೆಗೂ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ ಆದರೆ ಕೇವಲ ಸಕ್ಕರೆಯ ಬೆಲೆಯಿಂದ ಮಾತ್ರ ಎಫ್‌ಆರ್‌ಪಿ ಯನ್ನು ನಿರ್ಧರಿಸಬಾರದು. ಇನ್ನುಳಿದ ಆದಾಯದಿಂದಲೂ ನಿರ್ಧರಿಸಬೇಕು. ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯೇ ಭರಿಸಬೇಕು. ಕಬ್ಬು ಕಟಾವಿನ ನಂತರ ತೂಕದಲ್ಲಿ ಮೋಸವನ್ನು ತಡೆಗಟ್ಟಲು ಎಲ್ಲಾ ಎಪಿಎಂಸಿಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಸರಕಾರದಿಂದಲೇ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಾರೆಡ್ಡಿ ಮುರಾಳ್, ಯಾದಗಿರಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮುಸ್ಟೋರು, ಯುವ ಮೋರ್ಚಾದ ಅಧ್ಯಕ್ಷ ಸಂಗುರೆಡ್ಡಿ ಕನಕಟ್ಟಾ, ಪದಾಧಿಕಾರಿಗಳಾದ ಸಿಕೇಶ್ ರೆಡ್ಡಿ, ಸಂತೋಷ್ ಶೇಡೋಳೆ, ಸಂಜು ರೆಡ್ಡಿ ಆಣ್ಣದೂರ್, ಸುಶಾಂತ್ ರೆಡ್ಡಿ ಆಣ್ಣದೂರ್, ಸುರೇಶ್ ರೆಡ್ಡಿ, ಬಸವಕುಮಾರ್ ಪಾಟೀಲ್, ಅಶೋಕ್ ಪಾಟೀಲ್ ನಿರ್ಣಾ, ಶಾಜಿದ್ ಬಿರಾದರ್, ತುಕಾರಾಮ್ ಗೊಳ್ಳೆ, ಪಾಂಡು ರೆಡ್ಡಿ, ಗೋವಿಂದ್ ರಡ್ಡಿ ಹಾಗೂ ಜೈಪಾಲ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






