ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ : ಡಾ. ಎಸ್.ವಿ ಪಾಟೀಲ್

ಬೀದರ್ : ಪ್ರಕೃತಿಯೇ ಮಾನವನ ಬದುಕಿನ ಮೂಲಾಧಾರವಾಗಿದ್ದು, ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಹವಾಮಾನ ಬದಲಾವಣೆಯ ಪರಿಣಾಮಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಹಸಿರು ಆವರಣದ ವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ ಪಾಟೀಲ್ ಅವರು ಹೇಳಿದರು.
ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ತೋಟಗಾರಿಕಾ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಶುಕ್ರವಾರ 'ಪ್ರಕೃತಿಯಿಂದ ಸ್ಫೂರ್ತಿ-ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ' ಎಂಬ ಘೋಷವಾಕ್ಯದಡಿ ಆಚರಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
ಪ್ರಕೃತಿಯಿಂದ ಸ್ಫೂರ್ತಿ ಪಡೆದು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಗಿಡಮರಗಳನ್ನು ನೆಡುವುದು, ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಪರಿಸರ ಜಾಗೃತಿ ಮೂಡಿಸುವುದು ನಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸುವ ಪ್ರಮುಖ ಕ್ರಮಗಳಾಗಿವೆ ಎಂದರು.
ಪ್ರಕೃತಿಯು ಮಾನವನಿಗೆ ಬದುಕಲು ಅಗತ್ಯವಿರುವ ಗಾಳಿ, ನೀರು, ಆಹಾರ ಹಾಗೂ ಜೀವ ವೈವಿಧ್ಯತೆಯನ್ನು ಒದಗಿಸುತ್ತದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಕೈಗಾರಿಕೀಕರಣ, ನಗರೀಕರಣ ಮತ್ತು ಅತಿಯಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಿಂದ ಪರಿಸರದ ಮೇಲೆ ಅಪಾರ ಒತ್ತಡ ಉಂಟಾಗುತ್ತಿದೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಏರಿಕೆ, ಮಳೆಯ ಮಾದರಿಗಳ ಬದಲಾವಣೆ, ಬರ, ಪ್ರವಾಹ ಹಾಗೂ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಮಹಾವಿದ್ಯಾಲಯದ ಆವರಣದಲ್ಲಿ ವಿವಿಧ ಜಾತಿಯ ಹಣ್ಣಿನ, ಔಷಧೀಯ ಹಾಗೂ ನೆರಳು ನೀಡುವ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿಗಳಾದ ಡಾ.ಮಹಮ್ಮದ್ ಫಾರೂಖ್, ಡಾ. ಶ್ರೀನಿವಾಸ್ ಎನ್., ಡಾ.ಎಸ್. ಎಂ. ಪ್ರಸನ್ನ, ಡಾ. ಅಂಬ್ರೇಶ್, ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ಡಾ. ವಿಜಯಮಹಾಂತೇಶ್, ಡಾ. ರಮೇಶ್ ನಾಯಕ್, ಅಂಜನೇಯ್ ಎನ್., ಅನುರಾಧಾ ಆರ್.ವಡಗಾವೆ, ಜಾನ್ಹವಿ ಡಿ.ಆರ್. ಹಾಗೂ ಡಾ. ಕವಿತಾ ರಾಠೋಡ್ ಸೇರಿದಂತೆ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಭಾಗವಹಿಸಿದ್ದರು.






