ಗೊಂಡ, ಟೋಕರೆ ಕೋಳಿ ಸಮುದಾಯ ಈ ನೆಲದ ಮೂಲ ಆದಿವಾಸಿಗಳು: ಮಾಳಪ್ಪ ಅಡಸಾರೆ

ಬೀದರ್: ಗೊಂಡ ಹಾಗೂ ಟೋಕರೆ ಕೋಳಿ ಬುಡಕಟ್ಟು ಸಮುದಾಯಗಳೇ ಈ ನೆಲದ ಮೂಲ ಆದಿವಾಸಿಗಳಾಗಿದ್ದು, ಅವರ ಸರ್ವತೋಮುಖ ಅಭಿವೃದ್ಧಿ ವೇಗವಾಗಿ ಆಗಬೇಕಾಗಿದೆ ಎಂದು ಗೊಂಡ ಸಮುದಾಯದ ಮುಖಂಡ ಮಾಳಪ್ಪ ಅಡಸಾರೆ ಅವರು ಹೇಳಿದರು.
ಗೊಂಡ ಮಿತ್ರ ಮಂಡಳಿ ವತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆದಿವಾಸಿ ಸಮುದಾಯಗಳು ಐಕ್ಯತೆಯಿಂದ ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಹಿರಿಯ ಸಾಹಿತಿ ಮಾಣಿಕ ನೇಳಗಿ ಅವರು ವಿಶೇಷ ಉಪನ್ಯಾಸ ನೀಡಿ, ಬಿರ್ಸಾ ಮುಂಡಾ ಅವರು ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದು, ಆದಿವಾಸಿಗಳ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ನಾಯಕರಾಗಿದ್ದಾರೆ. ‘ಜಲ, ಜಂಗಲ್, ಜಮೀನ್’ ಆದಿವಾಸಿಗಳ ಹಕ್ಕು ಎಂಬುದನ್ನು ಪ್ರತಿಪಾದಿಸಿ, ತಮ್ಮ ಸಮುದಾಯವನ್ನು ಸಂಘಟಿಸಿ ಹೋರಾಟ ನಡೆಸಿದ್ದರು ಎಂದು ಸ್ಮರಿಸಿದರು.
ಬೀದರ್ ಜಿಲ್ಲೆಯಲ್ಲಿ ಗೊಂಡ, ಟೋಕರೆ ಕೋಳಿ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಹೆಚ್ಚಿದೆ. ಹೀಗಾಗಿ ಬೀದರ್ ವಿಶ್ವವಿದ್ಯಾಲಯದಲ್ಲಿ ಬುಡಕಟ್ಟು ಸಮುದಾಯಗಳ ಅಧ್ಯಯನ ಪೀಠ ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಸಲಹೆ ನೀಡಿದರು.
ಆದಿವಾಸಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ಡುಮ್ಮೆ ಅವರು ಮಾತನಾಡಿ, ವಿವಿಧ ಕಾರ್ಯಕ್ರಮಗಳ ಮೂಲಕ ಆದಿವಾಸಿ ಸಮುದಾಯಗಳಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪರಿಷತ್ತು ನಿರಂತರವಾಗಿ ಮಾಡುತ್ತಿದೆ. ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಬಿರ್ಸಾ ಮುಂಡಾ, ಬೊಮ್ಮಗೊಂಡ ಹಾಗೂ ವಾಲ್ಮೀಕಿ ಅವರ ಸಂದೇಶಗಳನ್ನು ತಲುಪಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗನ್ನಾತ್ ಮೇತ್ರೆರವರು ವಹಿಸಿದ್ದರು. ಈ ಸಂದರ್ಭದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ, ಈಶ್ವರ್ ಮಲಕಾಪೂರೆ ಹಾಗೂ ಚಂದ್ರಕಲಾ ಸೇರಿದಂತೆ ಮತ್ತಿತರರು ಇದ್ದರು.






