ಮಗಳಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಚಾಕು ಇರಿದು ಕೊಲೆ

ಬೀದರ್: ಮಗಳನ್ನು ಚುಡಾಯಿಸುತ್ತಿದ್ದ ಯುವಕನನ್ನು ಪ್ರಶ್ನಿಸಲು ಆತನ ಮನೆಗೆ ತೆರಳಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಕೆ) ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ .
ಅವಿನಾಶ್ ಎಂಬಾತ ಕೊಲೆ ಆರೋಪಿಯಾಗಿದ್ದು, ಸಂಜುಕುಮಾರ್ ಮೆಲಕೇರಿ (44) ಮೃತ ವ್ಯಕ್ತಿ.
ಸಂಜುಕುಮಾರ್ ಅವರ ಮಗಳನ್ನು ಅವಿನಾಶ್ ನಿರಂತರವಾಗಿ ಚುಡಾಯಿಸುತ್ತಿದ್ದನು ಎನ್ನಲಾಗಿದ್ದು, ಈ ಸಂಬಂಧ ಸಂಜುಕುಮಾರ್ ಹಾಗೂ ಅವರ ಪತ್ನಿ ಹಲವು ಬಾರಿ ಅವಿನಾಶ್‌ಗೆ ಬುದ್ಧಿಮಾತು ಹೇಳಿದ್ದರು ಎಂದು ತಿಳಿದುಬಂದಿದೆ. ಆದರೂ ಕೂಡ ಆತ ತನ್ನ ಹಳೆಯ ಚಾಳಿ ಮುಂದುವರಿಸಿದ್ದಾನೆ ಎನ್ನಲಾಗಿದೆ.
ಮಂಗಳವಾರ ಸಂಜೆ ಸಂಜುಕುಮಾರ್ ಅವರು ಅವಿನಾಶ್ ಮನೆಗೆ ತೆರಳಿ ವಿಚಾರಿಸಿದ ವೇಳೆ ವಾಗ್ವಾದ ನಡೆದಿದ್ದು, ಈ ಸಂದರ್ಭ ಅವಿನಾಶ್ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಸಂಜುಕುಮಾರ್ ಅವರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ನಸುಕಿನ ಜಾವ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಹತ್ತು ಮಂದಿಯ ವಿರುದ್ಧ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.






