ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಬೀದರ್‌ನಲ್ಲಿ ಬೃಹತ್ ಪ್ರತಿಭಟನೆ
ವಕ್ಫ್ ಆಸ್ತಿ ಕಬಳಿಕೆಗೆ ಕೇಂದ್ರದ ಹುನ್ನಾರ : ಸಚಿವ ರಹೀಮ್ ಖಾನ್

ಬೀದರ್ : ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಗರದಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಜಾಮಾ ಮಸೀದಿಯಿಂದ ಸಾಗಿದ ಪ್ರತಿಭಟನಾ ಮೆರವಣಿಗೆ ಗವಾನ್ ಚೌಕ್ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಸಾಗಿತ್ತು. ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿ ವಕ್ಫ್ ಕಾಯ್ದೆ ತಿದ್ದುಪಡಿ ವಿರುದ್ಧ ಘೋಷಣೆಗಳು ಕೂಗಿದರು.
ಪ್ರತಿಭಟನೆಯುದ್ದಕ್ಕೂ ‘ಹಮ್ ದಸ್ತುರ್ ಬಚಾನೆ ಆಯೇ ಹೈ, ಆವ್ ಹಮಾರೆ ಸಾಥ್ ದೊ. ಹಮ್ ಕಾನೂನ್ ಬಚಾನೆ ಆಯೇ ಹೈ, ಆವ್ ಹಮಾರೆ ಸಾಥ್ ದೊ’ ಎನ್ನುವಂತಹ ಹಲವಾರು ಘೋಷಣೆಗಳು ಮೊಳಗಿದವು. ನಂತರ ಅಂಬೇಡ್ಕರ್ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಡೆಸಿದ ಮುಖಂಡರು, ವಕ್ಫ್ ಬಗ್ಗೆ ಅವರವರ ವಿಚಾರಗಳನ್ನು ಮಂಡಿಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಚಿವ ರಹೀಮ್ ಖಾನ್ ಮಾತನಾಡಿ, ವಕ್ಫ್ ಎನ್ನುವುದು ಯಾವುದೇ ಸರಕಾರದ ಆಸ್ತಿ ಅಲ್ಲ. ಈ ಆಸ್ತಿ ಬಡವರಿಗೆ ಸಹಾಯವಾಗಲಿ ಎಂದು ನಮ್ಮ ಹಿರಿಯರು ಉಡುಗೊರೆ ನೀಡಿದ್ದು. ಬಡವರಿಗೆ ಸಹಾಯ ಮಾಡುವುದು ಸರಕಾರದ ಕೆಲಸ. ಆದರೆ ಆ ಕೆಲಸ ಕೇಂದ್ರ ಸರಕಾರ ಮಾಡುತ್ತಿಲ್ಲ. ಈಗ ವಕ್ಫ್ ಆಸ್ತಿ ಕಬಳಿಸಲು ಬರುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
ಬಡವರಿಗೆ ಸಹಾಯ ಮಾಡುವ ಕೆಲಸ ಸರಕಾರದ್ದಾಗಬೇಕು. ಇಂದು ಯುವಕರು ಪದವಿ ಪಡೆದಿದ್ದರೂ ನಿರುದ್ಯೋಗಿಗಳಾಗುತ್ತಿದ್ದಾರೆ. ಕೇಂದ್ರ ಸರಕಾರಕ್ಕೆ ಆ ಯುವಕರ ಬಗ್ಗೆ ಕಾಳಜಿ ಇಲ್ಲ. ಬಡವರು, ರೈತರು ಸಮಸ್ಯೆಯಲ್ಲಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಗೆ ಮೃತಪಟ್ಟ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಅಬು ತಾಲಿಬ್ ರಹ್ಮಾನಿ, ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಜಂಟಿ ಕ್ರಿಯಾ ಸಮಿತಿಯ ಸದಸ್ಯ ಅಬ್ದುಲ್ ಖದಿರ್, ಹೈದ್ರಾಬಾದ್‌ನ ವಿದ್ವಾಂಸ ಮಿಜಾಹಿ ದುಲ್ ಇಸ್ಲಾಮ್, ಸೇಕ್ರೆಡ್ ಹಾರ್ಟ್ ಚರ್ಚ್‌ನ ಫಾದರ್ ಕ್ಲಾರಿ ಡಿಸೋಜ, ಭಂತೆ ಜ್ಞಾನಸಾಗರ್, ಗ್ಯಾನಿ ದರ್ಬಾರ್ ಸಿಂಗ್, ದಲಿತ ಮುಖಂಡರಾದ ಮಾರುತಿ ಬೌದ್ದೆ, ಬಾಬುರಾವ್ ಪಾಸ್ವಾನ್, ಪ್ರಕಾಶ್ ರಾವಣ್, ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಬಾಬುರಾವ್ ಹೊನ್ನಾ, ಆರ್‌ಪಿಐನ ಮಹೇಶ್ ಗೊರನಾಳಕರ್, ನಿಝಾಮುದ್ದಿನ್, ಸರ್ಫರಾಝ್ ಹಾಸ್ಮಿ, ಇತರರು ಉಪಸ್ಥಿತರಿದ್ದರು.







