Bidar | ಬಾಣಂತಿ ಸಾವು ಪ್ರಕರಣ: ವೈದ್ಯ ಸೇರಿ ಮೂವರು ಸೇವೆಯಿಂದ ಬಿಡುಗಡೆ

ಸಾಂದರ್ಭಿಕ ಚಿತ್ರ (Photo credit: pexels.com)
ಬೀದರ್ : ಚಿಟಗುಪ್ಪ ತಾಲೂಕಿನ ಮನ್ನಾಎಖ್ಖೇಳ್ಳಿಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಣಂತಿಯೊಬ್ಬರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಸೇರಿದಂತೆ ಮೂವರ ನಿರ್ಲಕ್ಷವೇ ಈ ಘಟನೆಗೆ ಕಾರಣ ಎಂದು ಆರೋಪಿಸಿ ಆ ಮೂವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಫಿಜಿಶಿಯನ್ ಡಾ.ಜೈರಾಜ್, ಶುಶ್ರೂಷಾಧಿಕಾರಿ ರೈಚಲ್ ರಾಣಿ ಹಾಗೂ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಶರಣಬಸವ ಸಿಂಗ್ರಿ (ಹೊರ ಗುತ್ತಿಗೆ ನೌಕರ) ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
ಪ್ರಕರಣದ ಹಿನ್ನಲೆ: ತಾಳಮಡಗಿ ಗ್ರಾಮದ ನಿವಾಸಿ ರುಬೀನಾ (30) ಅವರು ಹೆರಿಗೆಗಾಗಿ ಜೂ. 9 ರಂದು ಮನ್ನಾಎಖ್ಖೇಳ್ಳಿಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಆದರೆ, ಅಂದು ಸಾಯಂಕಾಲ ಹೆರಿಗೆಯಾದರೂ ಕೂಡ ತಾಯಿಯು ತುಂಬಾ ರಕ್ತಶ್ರಾವವಾಗುತ್ತಿತ್ತು. ಆದ್ದರಿಂದ ಆಂಬುಲೆನ್ಸ್ ಮೂಲಕ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ರುಬೀನಾ ಅವರು ಮೃತಪಟ್ಟಿದ್ದರು.
ರುಬೀನಾ ಅವರನ್ನು ಆಂಬುಲೆನ್ಸ್ ನಲ್ಲಿ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸುವ ಮುನ್ನ ಶುಶ್ರೂಷಕರು ಮತ್ತು ಗ್ರೂಪ್ ಡಿ ನೌಕರರು ಸೇರಿ ರುಬೀನಾ ಅವರ ಪೋಷಕರಿಂದ 4 ಸಾವಿರ ಹಣ ಪಡೆದುಕೊಂಡಿರುತ್ತಾರೆ. ಆಸ್ಪತ್ರೆಯ ಕರ್ತವ್ಯದ ಮೇಲಿದ್ದ ಶುಶ್ರೂಷಾಧಿಕಾರಿ ಹಾಗೂ ಗ್ರೂಪ್ ಡಿ ಸಿಬ್ಬಂದಿಯವರ ನಿರ್ಲಕ್ಷತನದಿಂದಲೇ ರುಬೀನಾ ಅವರು ಮರಣ ಹೊಂದಿದ್ದಾರೆ ಎಂದು ಆರೋಪಿಸಿ ಮುಹ್ಮದ್ ರಿಯಾಝ್ ಅವರು ದೂರು ನೀಡಿದ್ದರು.
ಜೂ. 12 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಂಡದೊಂದಿಗೆ ಭೇಟಿ ನೀಡಿ ತನಿಖೆ ನಡೆಸಿದಾಗ ಫಿಜಿಶಿಯನ್ ಡಾ.ಜೈರಾಜ್, ಶುಶ್ರೂಷಾಧಿಕಾರಿ ರೈಚಲ್ ರಾಣಿ ಹಾಗೂ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಶರಣಬಸವ ಸಿಂಗ್ರಿ (ಹೊರ ಗುತ್ತಿಗೆ ನೌಕರ) ಅವರ ನಿಷ್ಕಾಳಜಿತನ, ಕರ್ತವ್ಯದಲ್ಲಿ ಲೋಪ ಹಾಗೂ ಬೇಜವಾಬ್ದಾರಿತನ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.






