ಸಂಘದ ಚಟುವಟಿಕೆಗಳು ಸಮಾಜೋದ್ಧಾರ, ರಾಷ್ಟ್ರದ ಪ್ರಗತಿಗೆ ಪೂರಕವಾಗಿರಲಿ: ಸಂಸದ ಸಾಗರ್ ಖಂಡ್ರೆ

ಭಾಲ್ಕಿ : ಸಂಘದ ಚಟುವಟಿಕೆಗಳು ಸಮಾಜೋದ್ಧಾರಕ್ಕೆ ಹಾಗೂ ರಾಷ್ಟ್ರದ ಪ್ರಗತಿಗೆ ಪೂರಕವಾಗಿರಬೇಕು ಎಂದು ಸಂಸದ ಸಾಗರ್ ಖಂಡ್ರೆ ಪ್ರತಿಪಾದಿಸಿದರು.
ನಗರದ ಸಂಸದರ ಗೃಹ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ‘ಸಾಗರ್ ಈಶ್ವರ್ ಖಂಡ್ರೆ ಅಭಿಮಾನಿಗಳ ಸಂಘ’ದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾರುತಿ ಭಂಗಾರೆ ನೇತೃತ್ವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಂಘದ ಧ್ಯೇಯೋದ್ದೇಶಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ, ಅವರನ್ನು ಮೇಲಕ್ಕೆತ್ತುವಂತಿರಬೇಕು. ಸ್ವಂತ ಹಿತಾಸಕ್ತಿ ಅಥವಾ ಸ್ವಾರ್ಥಕ್ಕಾಗಿ ಸಂಘಗಳನ್ನು ಹುಟ್ಟುಹಾಕಬಾರದು. ತಮ್ಮ ಹೆಸರಿನಲ್ಲಿ ಸಂಘ ಸ್ಥಾಪಿಸಿರುವುದು ಸಂತಸ ತಂದಿದೆ. ರಾಷ್ಟ್ರೋಪಯೋಗಿ ಹಾಗೂ ರಚನಾತ್ಮಕ ಕಾರ್ಯಗಳ ಮೂಲಕ ಸಂಘ ಎತ್ತರೆತ್ತರಕ್ಕೆ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.
ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾರುತಿ ಭಂಗಾರೆ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಸಂಸತ್ ಪ್ರವೇಶಿಸಿದ ಕೀರ್ತಿ ಸಂಸದ ಸಾಗರ್ ಖಂಡ್ರೆ ಅವರಿಗೆ ಸಲ್ಲುತ್ತದೆ. ಸಂಸತ್ತಿನ ಅಧಿವೇಶನದಲ್ಲಿ ಬೀದರ್ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಎಳೆಎಳೆಯಾಗಿ ವಿವರಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅವರು ಯಶಸ್ವಿಯಾಗುತ್ತಿದ್ದಾರೆ ಎಂದು ಹೇಳಿದರು.
ಬೀದರ್ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ರೈತರಿಗೆ ಬೆಳೆ ವಿಮೆ ದೊರಕಿಸಿಕೊಟ್ಟು, ತಂದೆ ಈಶ್ವರ್ ಖಂಡ್ರೆ ಅವರಿಗೆ ತಕ್ಕ ಮಗನಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಶ್ಲಾಘಿಸಿದರು.
ಅಭಿಮಾನಿಗಳ ಒತ್ತಾಯದ ಮೇರೆಗೆ ‘ಸಾಗರ್ ಈಶ್ವರ್ ಖಂಡ್ರೆ ಅಭಿಮಾನಿಗಳ ಸಂಘ’ವನ್ನು ರಾಜ್ಯಮಟ್ಟದಲ್ಲಿ ಸ್ಥಾಪಿಸಲಾಗಿದೆ. ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹದೊಂದಿಗೆ ಮುಂದಿನ ದಿನಗಳಲ್ಲಿ ಅತ್ಯುತ್ತಮ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಮಾರುತಿ ಭಂಗಾರೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶಿವಾನಂದ ಭಂಗಾರೆ, ಉಪಾಧ್ಯಕ್ಷ ಪ್ರಕಾಶ್ ಮಾಲಿಪಾಟೀಲ್, ಕಾರ್ಯದರ್ಶಿ ಮೋಯಿಜ್ಮಿಯ್ಯಾ ಇದ್ರೀಶಮಿಯ್ಯಾ, ಖಜಾಂಚಿ ಚಂದ್ರಕಾಂತ್ ಸೇರಿದಂತೆ ಸಂಸದ ಸಾಗರ್ ಖಂಡ್ರೆ ಅವರ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.






