ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಮಾಧ್ಯಮದ ಕೊಡುಗೆ ಅಪಾರ : ಸಚಿವ ಈಶ್ವರ್ ಖಂಡ್ರೆ

ಬೀದರ್: ವರದಿಗಾರಿಕೆ ಎನ್ನುವುದು ಅಧಿಕಾರ ಅಲ್ಲ, ಅದೊಂದು ಮಹತ್ವದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಅಭಿನಂದನಾ ಸಮಾರಂಭ ಹಾಗೂ ಭೀಮಣ್ಣ ಖಂಡ್ರೆ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯ ಚೆಕ್ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಹಿಂದಿಗಿಂತ ಪ್ರಸ್ತುತ ಮಾಧ್ಯಮ ಕ್ಷೇತ್ರದ ಜವಾಬ್ದಾರಿ ಹೆಚ್ಚಿದೆ. ಸೌಹಾರ್ದ ಭಾರತ ಕಟ್ಟಬೇಕಾದರೆ ನೈಜ ವರದಿಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದರು.
ಮಾಧ್ಯಮಗಳು ತಮ್ಮ ವರದಿಯಲ್ಲಿ ನೈಜತೆ ಮತ್ತು ಪಾರದರ್ಶಕತೆ ಕಾಪಾಡಿಕೊಂಡಾಗ ಮಾಧ್ಯಮರಂಗಕ್ಕೆ ಗೌರವ ಹೆಚ್ಚಲು ಸಾಧ್ಯವಾಗುತ್ತದೆ. ತಮ್ಮ ಸ್ಥಾನಮಾನಕ್ಕೆ ಧಕ್ಕೆ ಬರದಂತೆ ಪತ್ರಕರ್ತರು ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ. ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಮಾಧ್ಯಮದ ಕೊಡುಗೆ ಅಪಾರವಾಗಿದೆ. ಮಹಾತ್ಮ ಗಾಂಧಿ, ಅಂಬೇಡ್ಕರ್ ಸೇರಿದಂತೆ ಹಲವರು ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪತ್ರಕರ್ತರಿಗೆ ಸೂಕ್ತ ಭದ್ರತೆ, ರಕ್ಷಣೆ ಕೊಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಸ್ವಾತಂತ್ರ‍್ಯ ಪೂರ್ವದಲ್ಲಿ ಅನ್ಯಾಯದ ವಿರುದ್ಧ ಪತ್ರಕರ್ತರಾಗಿ ಡಾ.ಅಂಬೇಡ್ಕರ್ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಅವರ ಪರಿನಿಬ್ಬಾಣ ದಿನದಂದೇ ಅಭಿನಂದನಾ ಸಮಾರಂಭ ಹಾಗೂ ದತ್ತಿ ನಿಧಿ ಚೆಕ್ ಹಸ್ತಾಂತರ ಕಾರ್ಯಕ್ರಮ ಆಯೋಜಿಸಿದ್ದು ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಸಂಘದ ನೂತನ ರಾಜ್ಯಧ್ಯಕ್ಷ ಶಿವಾನಂದ್ ತಗಡೂರು ಅವರು ಸರಳ, ಸಜ್ಜನಿಕೆ ವ್ಯಕ್ತಿ. ಕೋವಿಡ್ ವೇಳೆ ಜೀವದ ಹಂಗು ತೊರೆದು ಪತ್ರಕರ್ತರ ಕೆಲಸ ಮಾಡಿದ್ದಾರೆ. ಕೋವಿಡ್ ವೇಳೆ ಮಡಿದ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಿದ್ದರು. ಯಾವುದೇ ಚುನಾವಣೆ ಇಲ್ಲದೆ ಸಂಘದ ಬೀದರ್ ಜಿಲ್ಲಾ ಘಟಕಕ್ಕೆ ಆನಂದ್ ದೇವಪ್ಪ ಅವರನ್ನು ನೇಮಕ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ್ ತಗಡೂರು ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕ ರಚನೆ ಸಂಬಂಧ ಅಡಾಕ್ ಸಮಿತಿ ರಚಿಸಿಸಿದ್ದು, ಈ ಸಮಿತಿಗೆ ಆನಂದ್ ದೇವಪ್ಪ ಅವರನ್ನು ಮುಖ್ಯಸ್ಥರನ್ನಾಗಿ ಹಾಗೂ ಅಪ್ಪಾರಾವ್ ಸೌದಿ ಮತ್ತು ಶಿವಕುಮಾರ್ ಸ್ವಾಮಿ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ. ಬೀದರ್ ಜಿಲ್ಲೆಯ ಸಂಘದ ಸರ್ವ ಸದಸ್ಯರು ಒಗ್ಗಟ್ಟಿನಿಂದ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಮೂರು ದಶಕಗಳ ಬಸ್ ಪಾಸ್ ಹೋರಾಟವನ್ನು ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿದೆ. ಎಲ್ಲಾ ಪತ್ರಕರ್ತರು ಉಚಿತವಾಗಿ ಪ್ರಯಾಣ ಮಾಡಬಹುದು. ಪತ್ರಕರ್ತರಿಗೆ ಆರೋಗ್ಯ ಭಾಗ್ಯ ನೀಡುವ ನಿಟ್ಟಿನಲ್ಲಿ ಸಿಎಂ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ ತಂದಿದೆ. ಮಾಧ್ಯಮ ಪಟ್ಟಿಯಲ್ಲಿ ಇರುವವರೆಗೆ ನಗದು ರಹಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಎಲ್ಲಾ ಪತ್ರಕರ್ತರಿಗೆ ಈ ಯೋಜನೆಯಡಿ ತರುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ್, ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಮಹಾನಗರ ಪಾಲಿಕೆ ಅಧ್ಯಕ್ಷ ಮಹಮ್ಮದ್ ಗೌಸ್, ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಡಾಕ್ ಕಮಿಟಿ ಮುಖ್ಯಸ್ಥ ಆನಂದ್ ದೇವಪ್ಪ, ಪ್ರಮುಖರಾದ ದೀಪಕ್ ವಾಲಿ, ಅಲಿಬಾಬಾ, ಸಿದ್ರಾಮಯ್ಯ ಸ್ವಾಮಿ, ಬಸವರಾಜ್ ಕಾಮಶೆಟ್ಟಿ, ಅಪ್ಪಾರಾವ್ ಸೌದಿ, ಮಲ್ಲಿಕಾರ್ಜುನ್ ಮರಖಲೆ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಬಾಬು ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ್ ಬಿರಾದಾರ್ ಸ್ವಾಗತಿಸಿದರು. ಮಾಳಪ್ಪ ಅಡಸಾರೆ, ಶಿವಕುಮಾರ್ ಸ್ವಾಮಿ ನಿರೂಪಿಸಿದರು.







