ಹಾಲು ಉತ್ಪಾದಕರ ಸಹಕಾರ ಸಂಘಗಳು ಆರ್ಥಿಕವಾಗಿ ಬಲವರ್ಧನೆಗೊಳ್ಳಬೇಕು : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಹಾಲು ಉತ್ಪಾದಕರ ಸಹಕಾರ ಸಂಘಗಳು ಆರ್ಥಿಕವಾಗಿ ಬಲವರ್ಧನೆಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತದ ವತಿಯಿಂದ ಚಿಕ್ಕಪೇಟಯಲ್ಲಿರುವ ಕೆಎಮ್ಎಫ್ ಡೈರಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಅವರ 2023-24ನೇ ಸಾಲಿನ ಅನುದಾನದಲ್ಲಿ ಬೀದರ್ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಎಸ್‌ಎಸ್ ಹಾಲಿನ ಕ್ಯಾನ್ ಹಾಗೂ ಡಿಪಿಎಮ್‌ಸಿಯುಗಳನ್ನು ಒದಗಿಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಸ್‌ಎಸ್ ಹಾಲಿನ ಕ್ಯಾನ್ ಮತ್ತು ಡಿಪಿಎಮ್‌ಸಿಯುಗಳನ್ನು ಒದಗಿಸುವುದರಿಂದ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಬಹಳಷ್ಟು ಉಪಯುಕ್ತವಾಗಲಿದೆ ಎಂದರು.
ಆಕಳು ಮತ್ತು ಎಮ್ಮೆ ಹಾಲನ್ನು ಹಾಲಿನ ಫ್ಯಾಟ್ ಮತ್ತು ಎಸ್ ಎನ್ ಎಫ್ (SNF) ಟೆಸ್ಟ್ ಮಾಡುವುದರ ಮೂಲಕ ಪ್ರತಿ ಲೀಟರ್ ಹಾಲಿಗೆ 35 ರೂ. ರಿಂದ 65 ರೂ. ದೊರಕಲಿದ್ದು, ಅವರ ಆರ್ಥಿಕ ಆದಾಯ ಹೆಚ್ಚಲಿರುವುದರಿಂದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ 192 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅನುದಾನದಲ್ಲಿ 51 ಲಕ್ಷ ರೂ. ಗಳ ಹಾಲಿನ ಕ್ಯಾನ್ ಹಾಗೂ 97 ಲಕ್ಷ ರೂ. ಗಳ 89 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ ಒಂದು ಡಿಪಿಎಮ್‌ಸಿಯುಗಳನ್ನು ಒದಗಿಸಿಕೊಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಬಿರಾದಾರ್, ನಾಗರಾಜ್ ಪಾಟೀಲ್, ಸಂಗೋಷ್ ಪಾಟೀಲ್, ಡಾ.ಎಸ್.ಎಸ್.ಹಿರೇಮಠ್, ಡಾ.ನರಸಪ್ಪಾ, ಡಾ.ಅಂಕಿತಾ, ಡಾ.ಪ್ರವೀಣ, ಕೆಎಂಎಫ್ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.







