ಬ್ರಿಮ್ಸ್‌ನಲ್ಲಿ 1.25 ಕೋಟಿ ರೂ. ವೆಚ್ಚದ ಎರಡು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳ ಲೋಕಾರ್ಪಣೆ ಮಾಡಿದ ಸಚಿವ ಈಶ್ವರ್ ಖಂಡ್ರೆ

ಬೀದರ್: ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಡಿ 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಸೌಲಭ್ಯಗಳ ಎರಡು ಎಲುಬು ಮತ್ತು ಕೀಲು ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಶನಿವಾರ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಹೈದರಾಬಾದ್, ಬೆಂಗಳೂರು ಹಾಗೂ ಸೋಲಾಪುರ ಮಾದರಿಯಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಎಲುಬು ಹಾಗೂ ಕೀಲು ಸಮಸ್ಯೆಗಳಿಂದ ಬಳಲುವ ರೋಗಿಗಳಿಗೆ ಈ ಸೌಲಭ್ಯಗಳು ಹೆಚ್ಚಿನ ಅನುಕೂಲವಾಗಲಿವೆ ಎಂದರು.
ಶಾಸಕ ರಹೀಂ ಖಾನ್ ಹಾಗೂ ತಮ್ಮ ಪ್ರಯತ್ನದ ಫಲವಾಗಿ ಶಸ್ತ್ರಚಿಕಿತ್ಸಾ ಕೊಠಡಿಗಳ ನಿರ್ಮಾಣ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಬ್ರಿಮ್ಸ್‌ನಲ್ಲಿ 12 ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ ಮಾತನಾಡಿ, ಅರ್ಹ ರೋಗಿಗಳು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ರಹಿಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಹಾಗೂ ಡಾ. ಜಾಬಶೆಟ್ಟಿ ಸೇರಿದಂತೆ ಬ್ರೀಮ್ಸ್ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.






