ಹೃದಯ ಕಾಯಿಲೆ ಸಂಬಂಧ ಜಾಗೃತಿ ಅರಿವು ಮೂಡಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೀದರ್ : ಜನ ಸಾಮಾನ್ಯರಲ್ಲಿ ವಿಶೇಷವಾಗಿ ಯುವಕರಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಹೃದಯದ ಆರೋಗ್ಯ, ಸುರಕ್ಷತೆ, ಹೃದಯ ಸಂಬಂಧ ಕಾಯಿಲೆ, ಆಹಾರ ಪದ್ಧತಿ, ಜೀವನ ಪದ್ಧತಿ ಕುರಿತಂತೆ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಅರಿವು ಜಾಗೃತಿ ಮೂಡಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ, ಇತ್ತೀಚಿಗೆ ರಾಜ್ಯಾದ್ಯಂತ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಹೃದಯ ಆರೈಕೆ ಕುರಿತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ಉಚಿತ ಹೃದಯ ಸಂಬಂಧಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಬೇಕು. ಜಿಲ್ಲೆ, ತಾಲೂಕು, CHC, PHC ಮಟ್ಟದ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿತ ತಾಂತ್ರಿಕ ಸೌಲಭ್ಯಗಳನ್ನು ಹೆಚ್ಚಿಸಬೇಕು. ಜನರ ಆರೋಗ್ಯಕ್ಕೆ ಧಕ್ಕೆಯಾಗುವ ಯಾವುದೇ ಅಂಶವನ್ನು ನಿರ್ಲಕ್ಷಿಸದೇ, ತಕ್ಷಣ ಕಾರ್ಯಾಚರಣೆ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಎದೆನೋವು, ಹೃದಯ ಕಾಯಿಲೆ ಕಂಡು ಬಂದಲ್ಲಿ ತಕ್ಷಣವೇ ತುರ್ತು ಚಿಕಿತ್ಸೆಗೆ ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇಸಿಜಿ ವ್ಯವಸ್ಥೆ ಇದೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ತಜ್ಞ ವೈದ್ಯರ ಮಾರ್ಗದರ್ಶನದಡಿ ಚಿಕಿತ್ಸೆ ನೀಡಲು ಆನ್ ಲೈನ್ ಹೃದಯ ಚಿಕಿತ್ಸೆ ವ್ಯವಸ್ಥೆ ಡಾ.ಪುನಿತ್ ರಾಜಕುಮಾರ ಹೃದಯ ಜ್ಯೋತಿ ಯೋಜನೆ ಚಾಲ್ತಿಯಲ್ಲಿದೆ. ಬೀದರ್ ನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್ ಲ್ಯಾಬ್ ನಿರ್ಮಾಣಗೊಂಡಿದ್ದು, ಶೀಘ್ರವೇ ಇಬ್ಬರು ಹೃದಯ ತಜ್ಞರು ಹಾಗೂ ತಂತ್ರಜ್ಞರನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಕ್ಯಾಥ್ ಲ್ಯಾಬ್ ನಲ್ಲಿ ಹೃದಯ ತಜ್ಞರು ಹಾಗೂ ತಂತ್ರಜ್ಞರನ್ನು ನೇಮಿಸುವುದಕ್ಕಾಗಿ ಶೀಘ್ರವೇ ಕ್ರಮಕೈಗೊಳ್ಳುವಂತೆ ಉನ್ನತ ವೈದ್ಯಕೀಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಫೋನ್ ಕರೆ ಮೂಲಕ ಮಾತನಾಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ತಾತ್ಕಾಲಿಕವಾಗಿ ಕಲಬುರಗಿಯ ಜಯದೇವ ಹೃದಯ ಆಸ್ಪತ್ರೆ ಜೊತೆ ಒಪ್ಪಂದ ಮಾಡಿ ಕ್ಯಾಥ್ ಲ್ಯಾಬ್ ಆರಂಭಗೊಳಿಸುವಂತೆ ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ್ ಶೇಟಕಾರ್ ಅವರಿಗೆ ತಿಳಿಸಿದರು.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಲ್ಲಿ 517 ರೋಗಿಗಳು ಹೃದಯ ಸಂಬಂಧಿತವಾಗಿ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಬೀದರ್ ನಗರದಲ್ಲಿ ನಾಲ್ಕು ಹೃದ್ರೋಗ ಆಸ್ಪತ್ರೆಗಳಿವೆ. ಮಾರ್ಚ್ ನಲ್ಲಿ 167, ಏಪ್ರಿಲ್‍ನಲ್ಲಿ 145, ಮೇ ನಲ್ಲಿ 143, ಜೂನ್‍ನಲ್ಲಿ 146 ರೋಗಿಗಳು ಆಯುಷ್ಮಾನ ಭಾರತ ಆರೋಗ್ಯ ಯೊಜನೆಯಡಿ ಚಿಕಿತ್ಸೆ ಪಡೆದಿದ್ದಾರೆ ಎಂದು ಬ್ರಿಮ್ಸ್ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಹಾಗೂ ಅಪರ್ ಜಿಲ್ಲಾಧಿಕಾರಿ ಡಾ.ಈಶ್ವರ್ ಉಳ್ಳಾಗಡ್ಡಿ ಸೇರಿದಂತೆ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.







