ಎಸ್‌ಐಆರ್ ವಿಚಾರದಲ್ಲಿ ನಮ್ಮ ವಿರುದ್ಧ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಬೀದರ್: ಎಸ್‌ಐಆರ್ ವಿಚಾರದಲ್ಲಿ ನಮ್ಮ ವಿರುದ್ಧ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಮೂಲಕ ಬಿಜೆಪಿಯವರು ಮತದಾರರ ಹಕ್ಕನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಆದರೆ, ಅರ್ಹ ಮತದಾರರ ಹಕ್ಕನ್ನು ಹೋಗಬಾರದು ಎಂದು ನಾವು ಪ್ರಯತ್ನ ಮಾಡುತ್ತಿದ್ದೇವೆ. ಬೇಕು ಅಂತಲೇ ಬಿಜೆಪಿಯರು ನಮ್ಮನ್ನು ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬರಗಾಲ ಘೋಷಣೆ ಬಗ್ಗೆ ಮಾತನಾಡಿದ ಅವರು, ಬರ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳು ವಿಭಾಗೀಯ ಮಟ್ಟದಲ್ಲಿ ಸಭೆ ಮಾಡಿದ್ದಾರೆ. ಎಲ್ಲಾ ಸಚಿವರು ಕೂಡಾ ಆಯಾ ಜಿಲ್ಲೆಯಲ್ಲಿ ಸಭೆ ಮಾಡುತ್ತಿದ್ದಾರೆ. ಎಲ್ಲೆಲ್ಲಿ ಬರವಿದೆ, ಮಳೆಗಾಲ ಕಡಿಮೆಯಿದೆ, ಎಲ್ಲಿ ಬಿತ್ತನೆಯಾಗಲಿಲ್ಲ ಎಂದು ಪರಿಶೀಲನೆ ಮಾಡುತ್ತಿದ್ದೇವೆ ಎಂದರು.
ಒಮ್ಮೆಲೇ ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಲು ಬರುವುದಿಲ್ಲ. ಅದಕ್ಕೆ, ಕೆಲವು ನಿಯಮಗಳಿವೆ. ಕೇಂದ್ರ ಸರಕಾರದ ನೀಯಮಗಳ ಪ್ರಕಾರ ಬರ ಜಿಲ್ಲೆಗಳೆಂದು ಘೋಷಣೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.






