ಮದುವೆಯಾಗುವುದಾಗಿ ನಂಬಿಸಿ ಶಾಸಕ ಪ್ರಭು ಚೌವ್ಹಾಣ್ ಪುತ್ರನಿಂದ ಮೋಸ ಆರೋಪ : ಸಂತ್ರಸ್ತೆ ಕುಟುಂಬಸ್ಥರ ವಿರುದ್ಧವೂ ಪ್ರಕರಣ ದಾಖಲು

ಬೀದರ್ : ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಅವರ ಮಗ ಪ್ರತೀಕ್ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಾದ ಬೆನ್ನಲ್ಲೇ, ಈದೀಗ ಪ್ರಭು ಚೌವ್ಹಾಣ್ ಅವರ ಸಂಬಂಧಿಕ ಮುರಳೀಧರ್ ಪವಾರ್ ಎಂಬವರು ನೀಡಿದ ದೂರಿನನ್ವಯ ಸಂತ್ರಸ್ತೆಯ 8 ಜನ ಕುಟುಂಬಸ್ಥರ ವಿರುದ್ಧ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.5 ರ ರಾತ್ರಿ 8:30 ಗಂಟೆಗೆ ಪ್ರಭು ಚೌವ್ಹಾಣ್ ಅವರ ಮನೆಗೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರು ತಾಲೂಕಿನ ಹಣೆಗಾಂವ್ ಗ್ರಾಮದ ನಿವಾಸಿಗಳಾದ ಸುಮಾರು 30ಕ್ಕೂ ಹೆಚ್ಚು ಜನರ ತಂಡ ಕೊಲೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮನೆಗೆ ನುಗ್ಗಿದ್ದರು. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮಾರಕಾಸ್ತ್ರಗಳಿಂದ ಪೆಟ್ಟು ಬೀಳುವಾಗ ಶಾಸಕರು ತಪ್ಪಿಸಿಕೊಂಡಿದ್ದಾರೆ. ಅಲ್ಲದೇ ನನಗೆ, ಸಂಜು ರಾಥೋಡ್, ಪ್ರತೀಕ್ ಚೌವ್ಹಾಣ್ ಹಾಗೂ ಅಮಿತ್ ರಾಥೋಡ್ ಎಂಬುವವರಿಗೆ ಗಾಯಗಳಾಗಿವೆ. ಮಹಿಳೆಯರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಈ ಪ್ರಕರಣಕ್ಕೆ ದೀಪಕ್ ಚಾಂದೋರಿ ಎಂಬ ವ್ಯಕ್ತಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು ನಾಲ್ಕೈದು ವಾಹನಗಳಲ್ಲಿ ಕೊಲೆ ಮಾಡುವ ಉದ್ದೇಶದಿಂದ 30ಕ್ಕೂ ಹೆಚ್ಚು ಜನರು ಬಂದಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.







