ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರದ ಬದಲು ಶಾಸಕರ ಖರೀದಿ ಕೇಂದ್ರ ಸ್ಥಾಪನೆಯಾಗಿದೆ : ಎನ್. ರವಿಕುಮಾರ್

ಬೀದರ್ : ಕೇಂದ್ರ ಸರಕಾರ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ 2,400ರೂ. ನಿಗದಿಗೊಳಿಸಿ ಖರೀದಿ ಕೇಂದ್ರ ಸ್ಥಾಪಿಸಿ ಎಂದು ಹೇಳಿದರೂ ಇಂದಿಗೂ ಕೂಡ ರಾಜ್ಯ ಸರಕಾರ ಖರೀದಿ ಕೇಂದ್ರ ಸ್ಥಾಪನೆ ಮಾಡಿಲ್ಲ. ಬದಲಾಗಿ ಶಾಸಕರ ಖರೀದಿ ಕೇಂದ್ರ ಸ್ಥಾಪನೆ ಮಾಡಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎನ್.ರವಿಕುಮಾರ್ ಅವರು ರಾಜ್ಯ ಸರಕಾರದ ವಿರುದ್ಧ ವ್ಯಂಗ್ಯವಾಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್.ರವಿಕುಮಾರ್, ರಾಜ್ಯದ ಕಾಂಗ್ರೇಸ್ ಸರಕಾರ ಖಾಸಗಿ ಎಜೆನ್ಸಿ ಜೊತೆಗೆ ಶಾಮೀಲಾಗಿ ರೈತರು ಬೆಳೆದ ಬೆಳೆಗಳನ್ನು ಕಡಿಮೆ ದರದಲ್ಲಿ ಖರೀದಿಸಿ ರೈತರ ಬೆನ್ನು ಮೂಳೆ ಮುರಿಯಲು ಮುಂದಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.
ಸರಕಾರ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ನ.27, 28 ಮತ್ತು 29ರಂದು 200 ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸರಕಾರವೇ ಪ್ರತಿ ಟನ್ ಕಬ್ಬಿಗೆ 3,300 ರೂ. ಬೆಲೆ ನಿಗದಿ ಮಾಡಿರುವಾಗ ಬೀದರ್ ಜಿಲ್ಲೆಯಲ್ಲಿ ಯಾಕೆ 2,950 ರೂ. ನಿಗದಿ ಮಾಡಲಾಗಿದೆ? ಇದು ಬೀದರ್ ಜಿಲ್ಲೆಗೆ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಇಲ್ಲಿ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ವಿರುದ್ಧ ಹರಿಹಾಯ್ದರು.
ರೈತರ ಮಕ್ಕಳಿಗೆ ವಿದ್ಯಾನಿಧಿ, ಹಾಲಿಗೆ ಪ್ರೋತ್ಸಾಹ ಧನ ನೀಡುತ್ತಿಲ್ಲ. ರೈತರಿಗೆ ಬಿಜೆಪಿ ಸರಕಾರದ ಸಂದರ್ಭದಲ್ಲಿ ವರ್ಷಕ್ಕೆ 4 ಸಾವಿರ ರೂ, ಕೇಂದ್ರದಿಂದ 6 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ರಾಜ್ಯ ಸರಕಾರದ ಪಾಲು ಇಂದಿನ ಸರಕಾರ ಕಡಿತಗೊಳಿಸಿದೆ. ರಾಜ್ಯದ ಕಾಂಗ್ರೆಸ್ ಸರಕಾರ ರೈತ ವಿರೋಧಿಯಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದರು.
ಶಾಸಕ ಡಾ. ಶೈಲೇಂದ್ರ ಬೆಲ್ಧಾಳೆ ಮಾತನಾಡಿ, ನ. 27 ಮತ್ತು 28ರಂದು ‘ಜನಪರ ನೋಟ, ರೈತಪರ ಹೋರಾಟ’ ಶೀರ್ಷಿಕೆಯಡಿ ರಾಜ್ಯದಾದ್ಯಂತ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸರಕಾರದ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ರೈತರ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಹೋರಾಟವನ್ನು ಪೊಲೀಸರ ಮುಖಾಂತರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎನಿಸುತ್ತಿದೆ. ಕಬ್ಬು ಬೆಳೆಗಾರರಿಗೆ ಕೇವಲ ಪ್ರತಿ ಟನ್ ಕಬ್ಬಿಗೆ 2,950ರೂ. ನೀಡಲು ನಿರ್ಧರಿಸಿರುವುದು ವಿಷಾದನೀಯ ಎಂದರು.
ಈ ಸಂದರ್ಭದಲ್ಲಿ ಹುಮನಾಬಾದ್ ಶಾಸಕ ಡಾ. ಸಿದ್ಧಲಿಂಗಪ್ಪ ಪಾಟೀಲ್, ಬಸವಕಲ್ಯಾಣ ಶಾಸಕ ಶರಣು ಸಲಗರ್, ಬಿಜೆಪಿಯ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ್, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ ಯರನಳ್ಳಿ, ಮುಖಂಡರಾದ ವಸಂತ್ ವಕೀಲ, ಕಿರಣ್ ಪಾಟೀಲ್, ಗುರುನಾಥ್ ರಾಜಗಿರಾ, ಬಸವರಾಜ್ ಪವಾರ್ ಹಾಗೂ ಶ್ರೀನಿವಾಸ್ ಚೌಧರಿ ಉಪಸ್ಥಿತರಿದ್ದರು.







