ಆಹ್ವಾನ ಪತ್ರಿಕೆಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು : ಎಂ.ನಾಗರಾಜು

ಬೀದರ್ : ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿ ಎಲ್ಲಾ ಸರ್ಕಾರಿ ಸಮಾರಂಭಗಳ ಆಹ್ವಾನ ಪತ್ರಿಕೆ, ಆಮಂತ್ರಣಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸಬೇಕು. ಶಿಷ್ಟಾಚಾರ ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಕ್ಕುಬಾಧ್ಯತೆ ಸಮಿತಿ ಅಧ್ಯಕ್ಷ ಎಂ.ನಾಗರಾಜು ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಎಲ್ಲ ಶಾಸಕರಿಗೂ ಸಮಾನ ಗೌರವ ಆದ್ಯತೆ ನೀಡತಕ್ಕದ್ದು, ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸುವುದು ಶಿಷ್ಟಾಚಾರದ ಉಲ್ಲಂಘನೆಯಾಗುತ್ತದೆ. ಶಿಷ್ಟಾಚಾರ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಮಿತಿಯು ಶಿಫಾರಸ್ಸು ಮಾಡಲಿದೆ ಎಚ್ಚರಿಸಿದರು.
ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳ ಆಹ್ವಾನ, ಆಮಂತ್ರಣ ಪತ್ರಿಕೆಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘಿಸಿದ ಅನೇಕ ಪ್ರಕರಣಗಳಿವೆ. ಈ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸಿ ವಿಚಾರಣೆ ನಡೆಸುವುದನ್ನು ತಪ್ಪಿಸಲು ನಾವೇ ಖುದ್ದಾಗಿ ಜಿಲ್ಲೆಗೆ ಆಗಮಿಸಿ ಸಮಿತಿ ಸಭೆ ನಡೆಸುತ್ತಿದ್ದೇವೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ವಿಧಾನ ಪರಿಷತ್ತ ಸದಸ್ಯರಿಗೂ ಸಮಾನ ಗೌರವ ನೀಡಬೇಕು ಎಂದು ಕಟುವಾಗಿ ಸೂಚಿಸಿದರು.
ವಿಧಾನ ಪರಿಷತ್ ಶಾಸಕ ಭೀಮರಾವ್ ಪಾಟೀಲ್ ಅವರಿಗೆ ಕಳೆದ 3 ವರ್ಷಗಳಿಂದಲೂ ಕಚೇರಿ ಕೊಠಡಿ ನೀಡದೇ ಇರುವುದಕ್ಕೆ ತೀವ್ರ ಆಕ್ಷೇಪ ಹಾಗೂ ಅತೃಪ್ತಿ ವ್ಯಕ್ತಪಡಿಸಿದ ಸಮಿತಿಯ ಎಲ್ಲ ಸದಸ್ಯರು, ಹಳೆಯ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾದಿಕಾರಿ ಈ ಕುರಿತು ಕ್ಷಮಾರ್ಪಣೆ ಕೇಳಿದ್ದು, ಈವರೆಗೂ ಅವರಿಗೆ ಔರಾದ್‌ನಲ್ಲಿ ಕೊಠಡಿ ಒದಗಿಸಲಿಲ್ಲ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಎಂ.ಜಿ.ಮೂಳೆ, ಭೀಮರಾವ್ ಪಾಟೀಲ್, ಬಾಗಲಕೋಟೆಯ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್, ಡಾ.ತಳವಾರ್, ಕೇಶವ್ ಪ್ರಸಾದ್, ಜಗದೇವ್ ಗುತ್ತೇದಾರ್, ರಾಮಾಜಿರಾವ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







