ಸಿಡಿಪಿಓ ಕಚೇರಿ ಹೆಸರು ಹೇಳಿ ಹಣ ಲೂಟಿ ; ಸಾರ್ವಜನಿಕರು ಎಚ್ಚರವಹಿಸಿ : ನಿತ್ಯಾನಂದ್ ಮಂಠಾಳಕರ್

ಬೀದರ್ : ಬಸವಕಲ್ಯಾಣದಲ್ಲಿ ಕೆಲವು ದಿನಗಳಿಂದ ಸೈಬರ್ ಅಪರಾಧಗಳು ಕೇಳಿಬರುತ್ತಿದ್ದು, ಅಂಗನವಾಡಿ ಶಾಲೆಗಳ ಮತ್ತು ಸಿಡಿಪಿಓ ಕಚೇರಿಯ ಹೆಸರು ಹೇಳಿ ಹಣ ಲೂಟಿ ಮಾಡುತ್ತಿದ್ದು, ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಸಮಾಜ ಸೇವಕ ನಿತ್ಯಾನಂದ್ ಮಂಠಾಳಕರ್ ಅವರು ತಿಳಿಸಿದ್ದಾರೆ.
ಬಸವಕಲ್ಯಾಣದ ನಗರದ ಶಾಹುಸ್ಸೆನ್ ಗಲ್ಲಿ (ಬೀದರ್ ಬೇಸ್), ಗೌಂಡಿ ಗಲ್ಲಿ, ತಾಜ್ ಕಾಲೋನಿಗಳಲ್ಲಿ ಜನರು ಮೊಸಹೋದ ಮಾಹಿತಿ ಇದೆ. ಜನರು ತಮ್ಮ ಖಾತೆಯಲ್ಲಿನ ಹಣವನ್ನು ಫೋನ್ ಪೇ, ಗೂಗಲ್ ಪೇ ಮೂಲಕ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೈಬರ್ ವಂಚಕರು ಬಾಣಂತಿಯರಿಗೆ ಟಾರ್ಗೆಟ್ ಮಾಡುತ್ತಿದ್ದಾರೆ. ಅವರ ಮನೆಯವರಿಗೆ ಕರೆ ಮಾಡುವ ಮೂಲಕ ನಿಮ್ಮ ಮನೆಯಲ್ಲಿ ಬಾಣಂತಿಯರು ಅಥವಾ ಪ್ರೆಗ್ನೆಂಟ್ ಮಹಿಳೆಯರಿದ್ದರೆ ನಿಮಗೆ ಸುಮಾರು 12,500 ರೂ. ನೀಡುತ್ತೇವೆ. ಹಾಗಾಗಿ ನಿಮ್ಮ ಫೋನ್ ಪೇ ಅಥವಾ ಗೂಗಲ್ ಪೇ ವಿವರ ನೀಡಿ ಎಂದು ಸಾರ್ವಜನಿಕರ ಅಕೌಂಟ್ ನಲ್ಲಿನ ಹಣ ಪಡೆಯುತ್ತಿದ್ದಾರೆ ಎಂದು ಇವರು ಆರೋಪಿಸಿದ್ದಾರೆ.
ಇಂತಹ ಯಾವುದೇ ಕರೆಗಳು ಬಂದರೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಹಾಗೆಯೇ ತಕ್ಷಣವೇ ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.







