ಬೀದರ್: ಅಪಘಾತದಲ್ಲಿ ಪುತ್ರ ಮೃತಪಟ್ಟ ಸುದ್ದಿ ತಿಳಿದು ತಾಯಿಯೂ ಸಾವು

ಶಾರದಾಬಾಯಿ / ಲಕ್ಷ್ಮಿಕಾಂತ್ ಜೋಶಿ
ಬೀದರ್: ಅಪಘಾತದಲ್ಲಿ ಪುತ್ರ ಮೃತಪಟ್ಟ ಸುದ್ದಿ ತಿಳಿದ ತಾಯಿಯೂ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಜಿಲ್ಲೆಯ ಘೋಡಂಪಳ್ಳಿ ಗ್ರಾಮದಲ್ಲಿ ನಡೆದಿದೆ.
ಗೂಡ್ಸ್ ವಾಹನ ಬಾವಿಗೆ ಬಿದ್ದು ವಾಹನದಲ್ಲಿದ್ದ ಘೋಡಂಪಳ್ಳಿ ನಿವಾಸಿಗಳಾದ ಲಕ್ಷ್ಮಿಕಾಂತ್ ಜೋಶಿ (45) ಮತ್ತು ರವಿ ಪಾಗದೊಡ್ಡಿ (18) ಇಬ್ಬರು ಮೃತಪಟ್ಟಿದ್ದರು.
ಲಕ್ಷ್ಮಿಕಾಂತ್ ಜೋಶಿ ಅವರು ಮೃತಪಟ್ಟ ಸುದ್ದಿ ತಿಳಿದ ತಕ್ಷಣವೇ ಅಘಾತಗೊಂಡ ಅವರ ತಾಯಿ ಶಾರದಾಬಾಯಿ (86) ಅವರು ಕೂಡ ಅಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಲಕ್ಷ್ಮಿಕಾಂತ್ ಜೋಶಿ, ರವಿ ಪಾಗದೊಡ್ಡಿ ಸೇರಿ ಸುಮಾರು 7ರಿಂದ 8 ಮಂದಿ ಬೀದರ್ ನಿಂದ ಚಿಟ್ಟಾ ಗ್ರಾಮದ ಮೂಲಕ ಘೋಡಂಪಳ್ಳಿಗೆ ಗೂಡ್ಸ್ ವಾಹನದಲ್ಲಿ ತೆರಳುತ್ತಿದ್ದ ವೇಳೆ ದಿಢೀರ್ ಬ್ರೇಕ್ ಹಾಕಿದ್ದರಿಂದ ರಸ್ತೆ ಪಕ್ಕದಲ್ಲಿಯೇ ಇರುವ ತೆರೆದ ಬಾವಿಗೆ ಗೂಡ್ಸ್ ವಾಹನವು ಜಾರಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಬೀದರ್ ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಚಿಟ್ಟಾ ಮತ್ತು ಘೋಡಂಪಳ್ಳಿ ಗ್ರಾಮಗಳ ಮಧ್ಯ 18 ಸ್ಪೀಡ್ ಬ್ರೇಕರ್ ಹಾಗೂ 5 ತೆರೆದ ಬಾವಿ ಇವೆ. ಇದರಿಂದಾಗಿ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಸ್ಪೀಡ್ ಬ್ರೇಕರ್ ಗಳನ್ನು ತೆಗೆದು ಬಾವಿಗಳು ಮುಚ್ಚಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.





