ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಭೇಟಿ; ತುರ್ತು ಪರಿಹಾರ ಕ್ರಮಕ್ಕೆ ಸೂಚನೆ

ಬೀದರ್: ಭಾಲ್ಕಿ ತಾಲೂಕಿನ ವಿವಿಧ ಭಾಗಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಅವರು ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ಥಳೀಯರ ಸಮಸ್ಯೆಗಳು ಆಲಿಸಿದರು. ವಿಪರೀತ ಮಳೆಯಿಂದ ಉಂಟಾದ ಬೆಳೆ ಹಾನಿಯ ಬಗ್ಗೆ ತುರ್ತು ಸಮೀಕ್ಷೆ ನಡೆಸಿ, ರೈತರಿಗೆ ಬೆಳೆ ವಿಮೆ ಕಂಪನಿಗಳಿಂದ ಸೂಕ್ತ ಪರಿಹಾರ ದೊರಕಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಕಾಸರ ತೂಗಾವ್, ಶಿವಣಿ, ಲಖನಗಾವ್, ಸೋಮಪುರ, ತಳವಾಡ(ಎಂ) ಹಾಗೂ ತೆಲಗಾವ್ ಗ್ರಾಮಗಳಿಗೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾವಿರಾರು ಎಕರೆಯಲ್ಲಿ ಬೆಳೆದು ನಿಂತಿದ್ದ ಸೋಯಾ, ತೊಗರಿ ಸೇರಿದಂತೆ ಹಲವು ಬೆಳೆಗಳು ನಾಶವಾಗಿದೆ. ನೂರಾರು ಮನೆಗಳು ಹಾನಿಗೊಳಗಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ನೀರು ಪಾಲಾಗಿದೆ. ಕೆಲವು ಸಂಪರ್ಕ ಸೇತುವೆಗಳು ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ, ವಿದ್ಯುತ್ ಮತ್ತು ನೀರು ಸರಬರಾಜು ಕಡಿತವಾಗಿದೆ. ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರಿಂದ ರೈತರ ಹೊಲಗಳಿಗೆ ಭೇಟಿ ನೀಡಿ, ಜಮೀನಿನಲ್ಲಿ ನೀರು ನಿಂತಿರುವುದು ಮತ್ತು ಪ್ರಮುಖ ಬೆಳೆಗಳಿಗೆ ಉಂಟಾದ ನಷ್ಟ ಪರಿಶೀಲಿಸಿದರು.
ಮನೆಗಳಿಗೆ ಹಾನಿಯಾದ ಕುಟುಂಬಗಳಿಗೆ ತಕ್ಷಣದ ಪರಿಹಾರ ನಿಧಿ ನೀಡಬೇಕು. ರಸ್ತೆ, ಸೇತುವೆ, ವಿದ್ಯುತ್ ಮತ್ತು ನೀರು ಸರಬರಾಜು ಸೇರಿದಂತೆ ಮೂಲಭೂತ ಸೌಲಭ್ಯಗಳು ತುರ್ತಾಗಿ ಪುನರ್ ಸ್ಥಾಪನೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಡಳಿತಾಧಿಕಾರಿ, ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ರೈತರು ಉಪಸ್ಥಿತರಿದ್ದರು.







