ಸಂಗೀತದಿಂದ ಏಕಾಗ್ರತೆ, ಆತ್ಮಸ್ಥೈರ್ಯ ಹೆಚ್ಚಳ : ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ

ಬೀದರ್ : ಸಂಗೀತವು ಭಾರತೀಯ ಸಂಸ್ಕೃತಿಯನ್ನು ಬೆಳೆಸುವುದರ ಜತೆಗೆ ವ್ಯಕ್ತಿಗಳಲ್ಲಿ ಏಕಾಗ್ರತೆ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ನಗರದ ಜಿಲ್ಲಾ ರಂಗ ಮಂದಿರದಲ್ಲಿ ಪ್ರಗತಿ ಸಂಗೀತ ಕಲಾ ಸಂಸ್ಥೆಯ 17ನೇ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ 'ಸಂಗೀತ ಸೌರಭ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ಕೇವಲ ಮನೋರಂಜನೆಯ ಸಾಧನವಲ್ಲ. ಆತ್ಮಕ್ಕೆ ಆನಂದ ಹಾಗೂ ಮನಕ್ಕೆ ಶಾಂತಿ ನೀಡುತ್ತದೆ. ಭಾರತೀಯ ಸಂಗೀತದಲ್ಲಿ ಭಾವನಾತ್ಮಕ ಸ್ಪರ್ಷವಿದೆ. ಪಾಶ್ಚಾತ್ಯ ಸಂಗೀತದಲ್ಲಿ ಅದನ್ನು ಕಾಣುವುದಿಲ್ಲ. ರಾಗಗಳಿಂದ ರೋಗವೂ ನಿವಾರಣೆಯಾಗಬಹುದು. ಹಾಗಾಗಿ ಶಾಸ್ತ್ರಿಯ, ಹಿಂದುಸ್ಥಾನಿ ಸಂಗೀತಕ್ಕೆ ವಿಶ್ವದಲ್ಲೇ ಮನ್ನಣೆ ಇದೆ ಎಂದು ಅಭಿಪ್ರಾಯಪಟ್ಟರು.
ಬರುವ ದಿನಗಳಲ್ಲಿ ನಗರದಲ್ಲಿ ಬೃಹತ್ ಸಂಗೀತೋತ್ಸವ ಆಯೋಜನೆ ಮಾಡೋಣ. ಇದಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದು ತಿಳಿಸಿದ ಅವರು, ಬೀದರನಲ್ಲಿಯೇ ಸಂಗೀತ ಪರೀಕ್ಷಾ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಸಂಸ್ಥೆಯ ಅಧ್ಯಕ್ಷ ರಮೇಶ್ ಕೋಳಾರಕರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗುದಗೆ ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಕಾಂತ್ ಗುದಗೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಜಿ.ಪೂರ್ಣಿಮಾ, ಧರ್ಮಸ್ಥಳ ಜನಜಾಗೃತಿ ವೇದಿಕೆ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್, ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರ್, ಉದ್ಯಮಿ ಚಂದ್ರಶೇಖರ್ ಹೆಬ್ಬಾಳೆ, ತ್ರಿವೇಣಿ ಕೊಳಾರಕರ್, ದೇವಿದಾಸ್ ಜೋಶಿ, ಹಿರಿಯ ಕಲಾವಿದ ಪಂ. ಡಾ. ವೀರಭದ್ರಪ್ಪ ಗಾದಗೆ, ಪಂ. ಕೇಶವರಾವ್ ಸೂರ್ಯವಂಶಿ, ಪಂ. ಜನಾರ್ಧನ್ ವಾಘಮಾರೆ, ಪ್ರೊ.ಎಸ್.ವಿ ಕಲ್ಮಠ್, ಹಿರಿಯ ಚಿಂತಕ ರಾಮಕೃಷ್ಣ ಸಾಳೆ ಮತ್ತು ಪತ್ರಕರ್ತ ಸದಾನಂದ ಜೋಶಿ ಸೇರಿದಂತೆ ಇತರರು ಇದ್ದರು.







