ಯಾವುದೇ ಸಂಘ ಸಂಸ್ಥೆ ಇದ್ದರೂ ಈ ದೇಶದ ಸಂವಿಧಾನ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು: ಪಿ.ಎಂ ನರೇಂದ್ರಸ್ವಾಮಿ

ಬೀದರ್: ಯಾವುದೇ ಸಂಘ ಸಂಸ್ಥೆ ಇದ್ದರೂ ಈ ದೇಶದ ಸಂವಿಧಾನ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು ಎಂದು ಮಳವಳ್ಳಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ಹೇಳಿದರು.
ಇಂದು ನಗರದಲ್ಲಿ ಸುದ್ಧಿಗಾರರಿಗೆ ಚಿತ್ತಾಪುರ್ ನಲ್ಲಿ ಭಗವಾಧ್ವಜ ಕೆಳಗಿಳಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಅವರು, ಯಾವುದೇ ಸಂಘ ಸಂಸ್ಥೆ ಇದ್ದರೂ ಈ ದೇಶದ ಸಂವಿಧಾನ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು. ಆರೆಸ್ಸೆಸ್ ಸಂಘ ಯಾವ ಕಾಯ್ದೆಯಡಿ ನೋಂದಣಿಯಾಗಿದೆ ಎಂದು ಪ್ರಶ್ನಿಸಿದರು.
ಆರೆಸ್ಸೆಸ್ ನವರು ಈ ದೇಶದ ಧ್ವಜಕ್ಕೆ ಯಾವ ಮಾನ್ಯತೆ ಕೊಟ್ಟಿಲ್ಲ. ರಾಷ್ಟ್ರ ಧ್ವಜಕ್ಕಿಂತ ಭಗವಾ ಧ್ವಜಕ್ಕೆ ಎತ್ತಿ ಹಿಡಿದ್ರೆ ಅವರನ್ನು ಏನಂತ ಹೇಳ್ಬೇಕು. ರಾಷ್ಟ್ರ ಪ್ರೇಮ ಎಲ್ಲದಕ್ಕಿಂತ ದೊಡ್ಡದು. ರಾಷ್ಟ್ರಧ್ವಜ, ರಾಷ್ಟ್ರಪ್ರೇಮ ಬೇಕೋ ಅಥವಾ ಬೇಡವೋ ಎನ್ನುವುದು ಚರ್ಚೆ ಆಗಲಿ ಎಂದರು.
ನಮ್ಮ ಸಚಿವ ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಪ್ರಶ್ನೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ನಾವು ಬ್ರಿಟಿಷರ ಗುಂಡೇಟಿಗೆ ಹೆದರದೆ, ದೇಶಕ್ಕಾಗಿ ಪ್ರಾಣ ಕೊಟ್ಟವರಾಗಿದ್ದೇವೆ. ದೇಶಕ್ಕಾಗಿ ದೇಹ ತ್ಯಾಗ, ಸರ್ವ ತ್ಯಾಗ ಮಾಡಿದ್ದೇವೆ. ಆರೆಸ್ಸೆಸ್ ನವರು ಗುಲಾಮಗಿರಿಯಲ್ಲಿದ್ದವರು. ಬ್ರಿಟಿಷರ ಹತ್ರ ಬಳುವಳಿ ತೆಗೆದುಕೊಂಡವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.





