ಹುಮನಾಬಾದ್ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್

ಹುಮನಾಬಾದ್ : ಹುಮನಾಬಾದ್ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದ ಮೂವರು ದಂಪತಿಗಳ ಮಧುರ ಪುನರ್ಮಿಲನಕ್ಕೆ ಸಾಕ್ಷಿಯಾಯಿತು.
ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದ ಮೂರು ಜೋಡಿಗಳು, ಲೋಕ್ ಅದಾಲತ್ ಮೂಲಕ ಪರಸ್ಪರ ರಾಜಿಯಾಗಿ ತಮ್ಮ ಸ್ವಇಚ್ಛೆಯಿಂದ ಮತ್ತೆ ಒಂದಾಗಿ ವೈವಾಹಿಕ ಜೀವನ ಮುಂದುವರಿಸಲು ನಿರ್ಧರಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತು ಕುರಾನೆ ಹಾಗೂ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಂತೋಷ್ ಬಿ. ಅವರ ಸಮ್ಮುಖದಲ್ಲಿ ದಂಪತಿಗಳು ಪರಸ್ಪರ ಹೂವಿನ ಹಾರ ಬದಲಾಯಿಸಿಕೊಳ್ಳುವ ಮೂಲಕ ಭಿನ್ನಾಭಿಪ್ರಾಯಗಳನ್ನು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಿದರು.
ಬಳಿಕ ನ್ಯಾಯಾಧೀಶರು ಹಾಗೂ ಉಪಸ್ಥಿತರಿದ್ದ ಗಣ್ಯರು ಒಂದಾದ ದಂಪತಿಗಳಿಗೆ ಸಿಹಿ ತಿನ್ನಿಸಿ, ಸುಖಮಯ ದಾಂಪತ್ಯ ಜೀವನಕ್ಕಾಗಿ ಶುಭ ಹಾರೈಸಿದರು.
ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಕೌಟುಂಬಿಕ ವ್ಯಾಜ್ಯಗಳಿಗೆ ಸೌಹಾರ್ದಯುತ ಪರಿಹಾರ ದೊರೆತಿದ್ದು, ಸಂಬಂಧಗಳನ್ನು ಪುನಃ ಬೆಸೆಯುವಲ್ಲಿ ಈ ವೇದಿಕೆ ಮತ್ತೊಮ್ಮೆ ಮಹತ್ವದ ಪಾತ್ರ ವಹಿಸಿತು.
ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲೂಕಾಧ್ಯಕ್ಷ ಮಂಜುನಾಥ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ನಾತೆ, ಹಿರಿಯ ವಕೀಲರಾದ ರವಿ ನಿರ್ಣ, ಅಶೋಕ್ ವರ್ಮ, ಕಿರಣ್ ಹನುಮಶೆಟ್ಟಿ, ಲಕ್ಷ್ಮಣ್ ನಂದಿ, ಸತೀಶ್ ರಾಂಪುರೆ, ಸಲ್ಮಾನ್ ಅಲಿ, ಪ್ರಭಾಕರ್ ನಾಗರಾಳೆ, ರವಿಕಾಂತ್ ಹೂಗಾರ್ ಹಾಗೂ ಕೃಷ್ಣ ಮುಗುಳಿ ಸೇರಿದಂತೆ ಅನೇಕ ವಕೀಲರು ಹಾಜರಿದ್ದರು.






