ರಾಷ್ಟ್ರವ್ಯಾಪಿ ಮುಷ್ಕರ ಹಿನ್ನೆಲೆ: ಬೀದರ್ ನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನೆ

ಬೀದರ್ : ಕೇಂದ್ರ ಸರಕಾರದ ಕಾರ್ಮಿಕ ನೀತಿ ವಿರೋಧಿಸಿ ಇಂದು ಭಾರತ್ ಬಂದ್ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಬೃಹತ್ ಮುಷ್ಕರ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಯಿತು.
ನಗರದ ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ ಹಾಗೂ ಶಿವಾಜಿ ವೃತ್ತದ ಮೂಲಕ ಸಾವಿರಾರು ಮಹಿಳಾ ಕಾರ್ಮಿಕರು ಸೇರಿ ವಿವಿಧ ಕಾರ್ಮಿಕ ಸಂಘಟನೆ ಜತೆಗೂಡಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಕಾರ್ಮಿಕ ಸಂಘಟನೆ ಜಂಟಿ ಸಮಿತಿಯ ಸಂಚಾಲಕ ಬಾಬುರಾವ್ ಹೊನ್ನಾ ಅವರು ಮಾತನಾಡಿ, ಬ್ರಿಟಿಷರ ಕೈಗೊಂಬೆಯಾಗಿದ್ದವರು ಇಂದು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇವರು ಸಂವಿಧಾನ ಬದಲಾವಣೆ ಮಾಡುವ ಮಾತನಾಡುತ್ತಿದ್ದಾರೆ. ಆದರೆ ಇವರಿಂದ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇವರು ದೇಶದ ಸಂಪತ್ತು ಒಗ್ಗಟ್ಟು ಮಾಡಿ ಅಂಬಾನಿ, ಅದಾನಿಗೆ ಮಾತ್ರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲಸದ ಅವಧಿ 8 ಗಂಟೆಯಿಂದ 10 ಗಂಟೆವರೆಗೆ ಹೆಚ್ಚಿಸಲಾಗಿದೆ. ಇದನ್ನು ಹಿಂಪಡೆದು ಕೆಲಸದ ಅವಧಿ 8 ಗಂಟೆಗೆ ಮುಂದುವರೆಸಬೇಕು. ಸಾರ್ವತ್ರಿಕ ವಲಯಗಳು ಮಾರಾಟಕ್ಕೆ ತೆಗೆದು, ರೈಲ್ವೆ, ಎಲ್.ಐ.ಸಿ ಗಳು ಖಾಸಗಿಕಾರಣಕ್ಕೆ ತಳ್ಳಲಾಗಿದೆ. ಖಾಸಗಿ ಬ್ಯಾಂಕ್ ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಪದ್ಧತಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಲಾಗಿದೆ.
ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆ ಹಾಗೂ ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಅವರಿಗೆ ಮಾಸಿಕ 25 ಸಾವಿರ ರೂ. ಸಂಬಳ ನೀಡಬೇಕು. ಕೇಂದ್ರ ಸರ್ಕಾರವು ಕಾರ್ಮಿಕ ಚಳುವಳಿ ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ತಂದಿದ್ದು, ಅವುಗಳನ್ನು ನಿಷೇಧ ಮಾಡಿ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆ ಜಂಟಿ ಸಮಿತಿಯ ಸಹ ಸಂಚಾಲಕ ಆರ್ ಪಿ.ರಾಜಾ, ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ನಜೀರ್ ಅಹಮ್ಮದ್, ಕಾರ್ಮಿಕ ಸಂಘಟನೆ ಜಂಟಿ ಸಮಿತಿಯ ಸಹ ಸಂಚಾಲಕ ಮಹೇಶ್ ನಾಡಗೌಡ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಡಿ.ಶಫಾಯತ್ ಅಲಿ, ಎಐಟಿಯುಸಿಯ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ಸುಜಾತಾ ಕೆ.ದೊಡ್ಡಿ ಹಾಗೂ ಸಾರಿಕಾ ಕಾಳೆ ಸೇರಿದಂತೆ ಸಾವಿರಾರು ಕಾರ್ಮಿಕರು ಉಪಸ್ಥಿತರಿದ್ದರು.







