2027ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೊಸ ರಾಜಕೀಯ ಪಕ್ಷ ಉದ್ಘಾಟನೆ: ಚೇತನ್ ಅಹಿಂಸಾ

ಹುಮನಾಬಾದ್, ಸೆ. 8: ತಮ್ಮ ಹೊಸ ರಾಜಕೀಯ ಪಕ್ಷವನ್ನು 2027ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳ ಹೋರಾಟದ ಬದುಕಿನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಭೇಟಿ ನೀಡಿದ್ದು, ಇಲ್ಲಿನ ಜನರ ಹೋರಾಟದ ಮನೋಭಾವ ಗಟ್ಟಿಯಾಗಿದೆ. ಆದರೆ ರಾಜಕೀಯ ವೈಫಲ್ಯದಿಂದ ಈ ಭಾಗ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಆರೋಪಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಪ್ರಾದೇಶಿಕ ನ್ಯಾಯಕ್ಕೆ ಒತ್ತು ನೀಡುವ ರಾಜಕೀಯ ಶಕ್ತಿ ಅಗತ್ಯವಾಗಿದೆ. ಜಾತಿ ಮತ್ತು ಧರ್ಮದ ಆಧಾರದಲ್ಲಲ್ಲ, ಸಿದ್ಧಾಂತದ ಆಧಾರದಲ್ಲಿ ಎಲ್ಲ ಸಂಘಟನೆಗಳು ಒಗ್ಗಟ್ಟಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಬಳಿ ಅಪಾರ ಹಣಬಲವಿದ್ದು, ಜನರು ಅನಿವಾರ್ಯತೆಯಿಂದ ಆ ಪಕ್ಷಗಳಿಗೆ ಮತ ಹಾಕುತ್ತಿದ್ದಾರೆ. ಆದರೆ ನಮ್ಮ ಪಕ್ಷವು ಸೈದ್ಧಾಂತಿಕ ಹೋರಾಟದ ನೆಲೆಯ ಮೇಲೆ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು.
ತಾವು ವಿಧಾನಸೌಧಕ್ಕೆ ಹೋಗಬೇಕೆಂಬ ಉದ್ದೇಶ ಹೊಂದಿಲ್ಲ. ತಮ್ಮ ಸಿದ್ಧಾಂತಗಳು ವಿಧಾನಸೌಧ ತಲುಪಬೇಕು ಎಂಬುದೇ ಗುರಿಯಾಗಿದೆ. ರಾಜಕೀಯಕ್ಕೆ ಅಲ್ಪಾವಧಿಗೆ ಬಂದಿಲ್ಲ; ತಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಸ್ಪಷ್ಟಪಡಿಸಿದರು.
ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ತಮ್ಮ ವೃತ್ತಿಯಾಗಿದ್ದು, ಸದ್ಯ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಮುಂದೆ ಅವಕಾಶ ಮತ್ತು ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
2028ರ ಕರ್ನಾಟಕ ವಿಧಾನಸಭೆ ಚುನಾವಣೆ ತಮ್ಮ ಪಕ್ಷದ ಮೊದಲ ಗುರಿಯಾಗಿದ್ದು, ಅಲ್ಲಿಯವರೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.
ಬೀದರ್ ಐತಿಹಾಸಿಕ ಪರಂಪರೆಯ ನಾಡಾಗಿದ್ದು, ಈ ಭಾಗದ ಇತಿಹಾಸ ಹೆಮ್ಮೆ ತರುವಂತದ್ದು. ರಾಜ್ಯದಲ್ಲಿ ಪರಿವರ್ತನೆ ಬರಬೇಕಾದರೆ ಅದು ಕಲ್ಯಾಣ ಕರ್ನಾಟಕದಿಂದಲೇ ಆರಂಭವಾಗಬೇಕು ಎಂದು ಚೇತನ್ ಅಹಿಂಸಾ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶೇಕ್ ಮಕ್ಸುದ್, ರಾಹುಲ್ ಮೇಟಿ, ಅಕ್ರಮ್ ಸೌಧಗಾರ್, ಸುಶೀಲ್ ಮಾಲೆ, ಸುನಿಲ್ ಶಿಂಧೆ, ಸಚಿನ್ ಕುಂದನ್, ಮನೋಜ್ ಜಾನ್ವಿರ್, ವಿಕಾಸ್ ಕೊಳಸ್ಕರ್ ಹಾಗೂ ಅಜಯ್ ವರ್ಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.






