ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಬೀದರ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಬೀದರ್ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬೀಜ ಹಾಗೂ ಗೊಬ್ಬರಗಳ ಕೊರತೆಯಾಗದಂತೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಮುಖ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭಗೊಳ್ಳುವ ಸಾಧ್ಯತೆಯಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ಬೀಜ ಹಾಗೂ ರಸಗೊಬ್ಬರ ಒದಗಿಸಬೇಕು. ಬೀಜ ವಿತರಣೆಗೆ ಸೂಕ್ತ ಕೇಂದ್ರಗಳನ್ನು ಗುರುತಿಸಿ ಗದ್ದಲ ಆಗದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಈ ವರ್ಷದ ಬಜೇಟ್ನಲ್ಲಿ ಘೋಷಿಸಿರುವ ಯೋಜನಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಆದ್ಯತೆ ನೀಡಿ ಕ್ರಮ ವಹಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ವಿವಿಧ ನಿಗಮಗಳ ವಸತಿ ನಿಲಯಗಳಿಗೆ ಹಾಗೂ ಇತರೇ ಇಲಾಖೆಗಳ ಕಾರ್ಯಕ್ರಮವನ್ನು ಕಟ್ಟಡಗಳ ನಿರ್ಮಾಣ ನಿವೇಶನಗಳ ಆದ್ಯತೆ ಮೇರೆಗೆ ಗುರುತಿಸಿ ಕ್ರಮ ವಹಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ತಾವು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಸೇರಿ ಈಗಾಗಲೇ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಹಾನಿಯನ್ನು ಕೂಡ ವರದಿ ಮಾಡಲಾಗಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಝಿಯಾವುಲ್ಲಾ ಮಾತನಾಡಿ, ಜಿಲ್ಲೆಗೆ ಸೋಯಾ, ಅವರೆಗೆ ಹೆಚ್ಚು ಬೇಡಿಕೆ ಇದ್ದು ಉಳಿದಂತೆ ತೊಗರಿ, ಉದ್ದು, ಹೆಸರು, ಜೋಳ ಬಿತ್ತನೆ ಬೀಜಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸದ್ಯ 76,120 ಕ್ವಿಂಟಲ್ ಬೀಜ ಬೇಡಿಕೆಯಿದ್ದು ಈಗಾಗಲೇ ವಿವಿಧ ಬೀಜ ಸಂಸ್ಥೆಗಳಿಗೆ ಇಂಡೆಂಟ್ ನೀಡಲಾಗಿದ್ದು, ಮೇ.15 ರ ಒಳಗಾಗಿ ದಸ್ತಾನುಕರಿಸಲಾಗುವುದು. ಒಟ್ಟು 4.21 ಲಕ್ಷ ಹೆಕ್ಟರ್ ಬಿತ್ತನೆ ಗುರಿಯಿದ್ದು, ಈ ಪೈಕಿ 2.22 ಲಕ್ಷ ಹೆಕ್ಟರ್ ಸೋಯಾ, ಅವರೆ ಹಾಗೂ 1.33 ಲಕ್ಷ ಹೆಕ್ಟರ್ ತೊಗರಿ ಬೆಳೆಯಾಗಿರುತ್ತವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತದೆ. ಅದಲ್ಲದೇ 115 ಹೆಚ್ಚುವರಿ ಕೇಂದ್ರಗಳು ತೆರೆಯಲಾಗುವುದು. ಒಟ್ಟು 37.106 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ರಸಗೊಬ್ಬರ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







