ಭಾರತದಲ್ಲಿ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ : ಮುಹಮ್ಮದ್ ಇಕ್ಬಾಲ್ ಮುಲ್ಲಾ

ಬೀದರ್ : ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲೆ ಅನ್ಯಾಯ, ದಬ್ಬಾಳಿಕೆ ಹೆಚ್ಚುತ್ತಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕೇಂದ್ರ ಸಲಹಾ ಮಂಡಳಿ ಸದಸ್ಯ ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ಅವರು ಕಳವಳ ವ್ಯಕ್ತಪಡಿಸಿದರು.
ಗುರುವಾರ ಸಾಯಂಕಾಲ ನಗರದ ಬೀದರ್ ಗೇಟ್ ವೇ ಸಭಾಂಗಣದಲ್ಲಿ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನ ಪ್ರಯುಕ್ತ ಏರ್ಪಡಿಸಿದ್ದ ‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್' ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
6ನೇ ಶತಮಾನದಲ್ಲಿ ಹೆಣ್ಣುಮಕ್ಕಳು ಜನಿಸಿದ ಕೂಡಲೇ ಸಮಾಧಿ ಮಾಡಲಾಗುತ್ತಿತ್ತು. ಇಂದು ಅನೇಕ ಶ್ರೀಮಂತರು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳ ಬದುಕುವ ಹಕ್ಕು ಕಸಿಯುತ್ತಿದ್ದಾರೆ ಎಂದ ಅವರು, ನಿರಪರಾಧಿಗಳು 30 ರಿಂದ 35 ವರ್ಷ ಜೈಲಿನಲ್ಲಿದ್ದು, ನಂತರ ನಿರಪರಾಧಿಗಳಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಐದು ವರ್ಷಗಳಿಂದ ಜೈಲಿನಲ್ಲಿರುವ ಕೆಲವರ ವಿಚಾರಣೆ ಇನ್ನೂ ಪ್ರಾರಂಭವೇ ಆಗಿಲ್ಲ ಎಂದು ನ್ಯಾಯಾಂಗದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಝಾಮುದ್ದೀನ್, ಉಪನ್ಯಾಸಕಿ ವಿದ್ಯಾದೇವಿ ಹಿರೇಮಠ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಂತಿ ಪ್ರಕಾಶನದ ಪ್ರವಾದಿ ಮುಹಮ್ಮದ್ ಅವರ ಜೀವನ ಕುರಿತ ಎರಡು ಕೃತಿಗಳನ್ನು ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಾ.ರಾಮಚಂದ್ರ ಗಣಾಪುರ್, ಜಮಾ ಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠ್ಠಲದಾಸ್ ಪ್ಯಾಗೆ, ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಅಸ್ಮಾ ಸುಲ್ತಾನಾ, ಜಿಲ್ಲಾ ಸಂಚಾಲಕಿ ತಾಹೀದ್ ಸಿಂಧೆ, ಪ್ರಮುಖರಾದ ಶ್ರೀಕಾಂತ್ ಸ್ವಾಮಿ, ಗುರುನಾಥ್ ಗಡ್ಡೆ, ಓಂಪ್ರಕಾಶ್ ರೊಟ್ಟೆ, ಮಹೇಶ್ ಗೋರನಾಳಕರ್, ವಿನಯ್ ಮಾಳಗೆ, ಎಂ.ಎಸ್. ಉಪ್ಪಿನ್, ಡಾ. ಲಕ್ಕಿ, ಬಾಬುರಾವ್ ಹೊನ್ನಾ, ವಿಜಯಕುಮಾರ್, ಜಗದೀಶ್ ಬಿರಾದಾರ್, ಶಿಕ್ಷಕಿಯರಾದ ಬಿಲ್‍ಕಿಸ್ ಫಾತಿಮಾ, ಲತಿಕಾ, ಡಾ. ಸಾಲಿಕಾ ಕೌಸರ್, ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಜ್ಜಂ, ಮುಹಮ್ಮದ್ ತಾಹಾ ಕಲೀಮುದ್ದೀನ್, ಸಿರಾಜ್ ನೆಲವಾಡ ಹಾಗೂ ಮುಹಮ್ಮದ್ ಆರಿಫುದ್ದೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







