ಡಾ.ಜಯದೇವಿ ತಾಯಿ ಲಿಗಾಡೆ, ಪ್ರಭುರಾವ್ ಕಂಬಳಿವಾಲೆ ಟ್ರಸ್ಟ್ ರಚನೆಗೆ ಆದೇಶ : ಸಚಿವ ಶಿವರಾಜ್ ತಂಗಡಗಿ

ಬೀದರ್ : ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಪ್ರಖ್ಯಾತ ಲೇಖಕಿ, ಸಮಾಜ ಸೇವಕಿ ಡಾ.ಜಯದೇವಿ ತಾಯಿ ಲಿಗಾಡೆ ಹಾಗೂ ಕನ್ನಡ ಹೋರಾಟಗಾರ, ಶ್ರೀಮಾನ್ ಸಾರ್ವಜನಿಕ ಎಂದೇ ಪ್ರಖ್ಯಾತಿ ಪಡೆದ ಪ್ರಭುರಾವ್ ಕಂಬಳಿವಾಲೆ ಅವರ ಹೆಸರಿನಲ್ಲಿ ಟ್ರಸ್ಟ್ ಗಳು ರಚಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.
ಹೈದರಾಬಾದ್ ಕರ್ನಾಟಕದ ಜನತೆಯ ಬಹುದಿನದ ಅಪೇಕ್ಷೆಯಂತೆ ಈ ಎರಡು ಟ್ರಸ್ಟ್ ಗಳನ್ನು ರಚಿಸುವ ಸಂಬಂಧ ಬಂದಿದ್ದ ಪ್ರಸ್ತಾವನೆಗೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಈ ಕೂಡಲೇ ಆದೇಶ ಹೊರಡಿಸುವಂತೆ ಇಲಾಖಾ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಇಬ್ಬರು ಮಹನೀಯರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಆದ್ದರಿಂದ ಈ ಟ್ರಸ್ಟ್ ಗಳನ್ನು ಅವರ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ರಚಿಸಲಾಗುತ್ತಿದೆ. ಈ ಎರಡು ಟ್ರಸ್ಟ್ ಗಳಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.





