ಶಾಸಕ ಪ್ರಭು ಚೌವ್ಹಾಣ್‌ರಿಂದ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ನಮಗೆ ರಕ್ಷಣೆ ಬೇಕು : ಸಂತ್ರಸ್ತೆ

ಬೀದರ್ : ಶಾಸಕ ಪ್ರಭು ಚೌವ್ಹಾಣ್ ಅವರ ಕಡೆಯಿಂದ ನಮ್ಮ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಇದ್ದು, ನಮಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಸಂತ್ರಸ್ತೆ ಇದೀಗ ಮಾಧ್ಯಮಗಳ ಮುಂದೆ ನ್ಯಾಯ ಕೊಡಿಸುವಂತೆ ಕೋರಿದ್ದಾರೆ.
ಜು.21ರಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಪ್ರಭು ಚೌವ್ಹಾಣ್ ಅವರು ನಮ್ಮ ಮೇಲೆ ಮಾಡುತ್ತಿರುವ ಆರೋಪ ಸುಳ್ಳಾಗಿದೆ. ಪ್ರತೀಕ್ ಬಿಟ್ಟರೆ ನಾನು ಬೇರೆ ಯಾವ ಹುಡುಗನನ್ನೂ ಪ್ರೀತಿಸಲಿಲ್ಲ. ವಿಡಿಯೋ ಕಾಲ್ ನಲ್ಲಿ ನಾನು ಬೇರೊಬ್ಬ ಹುಡುಗನ ಜೊತೆಗೆ ಮಾತಾಡಿದ್ದೇನೆ ಎಂದು ತೋರಿಸಿದ ಫೋಟೋ ಅವರು ಎಡಿಟ್ ಮಾಡಿದ್ದಾಗಿದೆ. ಪ್ರತೀಕ್ ಮತ್ತು ನನ್ನ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿದೆ ಎಂದು ಸುಳ್ಳು ಹೇಳಿದ್ದಾರೆ. ಆದರೆ ನಮ್ಮಿಬ್ಬರ ನಿಶ್ಚಿತಾರ್ಥ ಯಾವುದೇ ಹಿರಿಯರ ಎದುರು ಮುರಿದು ಬಿದ್ದಿಲ್ಲ ಎಂದು ಅವರು ಹೇಳಿದ್ದಾರೆ.
ಭಗವಂತ್ ಖುಬಾ ಎನ್ನುವವರು ಯಾರು ಎಂದು ನಮಗೆ ಗೊತ್ತೇ ಇರಲಿಲ್ಲ. ಅವರ ಬಗ್ಗೆ ಪ್ರಭು ಚೌವ್ಹಾಣ್ ಅವರ ಮನೆಯವರು ತಿಳಿಸಿದಾಗ ತಿಳಿದಿದೆ. ಈ ಪ್ರಕರಣದಲ್ಲಿ ರಾಜಕೀಯ ಬೆರೆಸಿ ಇದನ್ನು ಮುಚ್ಚಬೇಕು ಎಂದು ಅವರು ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು.
ಪ್ರತೀಕ್ ಚೌವ್ಹಾಣ್ ಅವರು ತಪ್ಪು ಮಾಡದಿದ್ದರೆ ಅವರೇ ಬಂದು ಹೇಳಿಕೆ ಕೊಡಬಹುದಿತ್ತು. ಆದರೆ ಅವರ ಬದಲಾಗಿ ಅವರ ಅಪ್ಪ ಪ್ರಭು ಚೌವ್ಹಾಣ್ ಅವರು ಯಾಕೆ ಹೇಳಿಕೆ ನೀಡುತ್ತಿದ್ದಾರೆ. ಪ್ರತೀಕ್ ಚೌವ್ಹಾಣ್ ನನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದು, ನನಗೆ ನ್ಯಾಯ ಬೇಕು ಎಂದು ಸಂತ್ರಸ್ತೆ ಯುವತಿ ತಿಳಿಸಿದ್ದಾರೆ.
ಈ ವೇಳೆ ಸಂತ್ರಸ್ತೆಯ ಸಹೋದರ ಮಾತನಾಡಿ, ಪ್ರತೀಕ್ ಚೌವ್ಹಾಣ್ ಅವರು ಸುಮಾರು ಯುವತಿಯರ ಜೊತೆ ಹೀಗೆಯೇ ಮೋಸ ಮಾಡಿರುವುದು ನಮಗೆ ಗೊತ್ತಾಗಿದೆ. ಇನ್ನೊಬ್ಬ ಯುವತಿ ಕೂಡ ನನ್ನ ಸಹೋದರಿಯ ಹಾಗೆಯೇ ಮೋಸ ಹೋಗಿದ್ದು, ಅವಳು ಕೂಡ ನಮ್ಮ ಬೆಂಬಲಕ್ಕೆ ನಿಂತಿದ್ದಾಳೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಹಾಗೆಯೇ ನಮಗೆ ನ್ಯಾಯ ಸಿಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂತ್ರಸ್ತೆಯ ತಾಯಿ ಉಪಸ್ಥಿತರಿದ್ದರು.







