ಮುಂದಿನ ಪೀಳಿಗೆಗೆ ಉತ್ತಮ ಭೂಮಿ ಹಸ್ತಾಂತರಿಸುವುದು ನಮ್ಮ ಆದ್ಯ ಕರ್ತವ್ಯ : ಸಚಿವ ಈಶ್ವರ್ ಖಂಡ್ರೆ
15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ

ಬೀದರ್ : ಇತ್ತೀಚಿನ ದಿನಮಾನಗಳಲ್ಲಿ ಹವಾಮಾನ ಬದಲಾವಣೆಯಿಂದ ಪ್ರಕೃತಿ ವಿಕೋಪ, ಸುನಾಮಿ, ಬರ, ಗುಡ್ಡ ಕುಸಿತ ಹಾಗೂ ತಾಪಮಾನ ಹೆಚ್ಚಳದಂತಹ ಘಟನೆಗಳು ಹೆಚ್ಚಾಗುತ್ತಿವೆ. ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಭೂಮಿ ಹಸ್ತಾಂತರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಗಿಡ ನೆಟ್ಟು ಅದನ್ನು ಸಂರಕ್ಷಿಸುವುದು ನಮ್ಮ ದಿನ ನಿತ್ಯದ ಕಾಯಕವಾಗಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಇಂದು ನಗರದ ಬೆಲ್ದಾಳೆ ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ʼ15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನʼವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರವು ಪ್ರಥಮ ಬಾರಿಗೆ ಬೃಹತ್ ಪ್ರಮಾಣದಲ್ಲಿ ಪಾರಂಪರಿಕ ವೈದ್ಯ ಸಮ್ಮೇಳನ ನಡೆಸುತ್ತಿದೆ. ವೈದ್ಯ ಪರಿಷತ್ ಪದಾಧಿಕಾರಿಗಳು ನೀಡಿದ ಬೇಡಿಕೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ಮಾಡಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಧನ್ವಂತರಿ ವನ ನಿರ್ಮಾಣ, ಪಾರಂಪರಿಕ ವೈದ್ಯ ಪರಿಷತ್ ಭವನಗಳ ನಿರ್ಮಾಣ ಹಾಗೂ ಜಿಲ್ಲಾ ಮಟ್ಟದಲ್ಲಿ ಪಾರಂಪರಿಕ ವೈದ್ಯ ಸಮ್ಮೇಳನಕ್ಕೆ ಅನುದಾನ ನೀಡುವ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದ ಎಲ್ಲ ಔಷಧೀಯ ಸಸ್ಯಗಳು ದಾಖಲಿಸಿ ಮನಕುಲದ ಒಳತಿಗಾಗಿ ಉಪಯೋಗಿಸುವ ಹಿನ್ನೆಲೆಯಲ್ಲಿ ಜೀವ ವೈವಿದ್ಯತೆ ಮಂಡಳಿಯು ವಿವಿಧ ಕಾರ್ಯಗಳು ಮಾಡುತ್ತಿದೆ. ಈಗಾಗಲೇ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಔಷಧೀಯ ಸಸ್ಯಗಳನ್ನು ದಾಖಲಿಕರಿಸಲಾಗಿದೆ ಎಂದರು.
ಅರಣ್ಯ ಇಲಾಖೆಯಿಂದ ಎರಡು ವರ್ಷಗಳಲ್ಲಿ ಒಟ್ಟು 9 ಕೋಟಿ ಸಸಿಗಳು ನೆಡಲಾಗಿದೆ. ಅರಣ್ಯ ಬ್ಲಾಕ್, ಕಂದಾಯ, ರೈತರ ಜಮೀನು ಹಾಗೂ ರಸ್ತೆ ಬದಿಗಳಲ್ಲಿ ಗಿಡ ಮರಗಳನ್ನು ಬೆಳೆಸಲಾಗುತ್ತಿದೆ ಎಂದು ಅವರು ಹೇಳಿದರು.
ನೂರಾರು ವರ್ಷಗಳಿಂದ ಪಾರಂಪರಿಕವಾಗಿ ಹರಿದು ಬಂದಿರುವ ಈ ಪಾರಂಪರಿಕ ವೈದ್ಯಕೀಯ ಜ್ಞಾನ ಉಳಿಸಿ ಬೆಳೆಸಬೇಕಾಗಿದೆ. ಅನೇಕ ರೋಗಗಳಿಗೆ ಪಾರಂಪರಿಕ ವೈದ್ಯ ಪದ್ಧತಿ ಸಿದ್ಧ ಔಷಧಿಯಾಗಿದೆ. ಕರ್ನಾಟಕ ರಾಜ್ಯವು ಔಷಧೀಯ ಸಸ್ಯಗಳ ಶ್ರೀಮಂತ ಆಗರವಾಗಿದೆ. ಇದನ್ನು ಸಂರಕ್ಷಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಸಸ್ಯಗಳು ದಾಖಲಾತಿಯಾಗಬೇಕು. ದತ್ತಾಂಶ ಉಪಯೋಗವಾಗಬೇಕು. ಪಾರಂಪರಿಕ ವೈದ್ಯ ಪದ್ಧತಿಯು ವಾಸಿಯಾಗದ ಅನೇಕ ರೋಗಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, 12ನೇ ಶತಮಾನದ ಬಸವಾದಿ ಶರಣ ವೈದ್ಯ ಸಂಗಣ್ಣನವರು ಪಾರಂಪರಿಕ ಔಷಧೀಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಈ ಕುರಿತಂತೆ ಹಲವಾರು ವಚನಗಳು ಬರೆದಿದ್ದಾರೆ. ಯಾವುದಾದರೂ ರೋಗ ಬಂದಲ್ಲಿ ಶಿವಾರ್ಚನೆಯ ಬೇಡಿಕೊಳ್ಳುವೆಂದು ಇಷ್ಟಲಿಂಗ ಶಿವಯೋಗ ಮಾಡಿಕೊಳ್ಳಬೇಕು ಎಂದು ವೈದ್ಯ ಸಂಗಣ್ಣನವರು ತಿಳಿಸಿದ್ದಾರೆ. ಇಷ್ಟಲಿಂಗದಲ್ಲಿ ಅನೇಕ ಗಿಡಮೂಲಿಕೆ ರಸ ಹಾಕುವುದರಿಂದ ರೋಗ ನಿವಾರಣೆಗೆ ಸಹಾಯವಾಗುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ, ಮುಖ್ಯ ಅರಣ್ಯ ಸಂರಕ್ಷಣಾದಿಕಾರಿ ಜಗತರಾಮ್, ಗುಲಬರ್ಗಾ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಪನವಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ ಎಂ ವಾನತಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ ಬಿ ಪಾಟೀಲ್, ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಜಿ ಮಹಾದೇವಯ್ಯ, ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತನ ಅಧ್ಯಕ್ಷ ಆನಂದ್ ವಿ.ಹೆರೂರ್, ಪಾರಂಪರಿಕ ವೈದ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಪ್ರೊ.ಜಗನ್ನಾಥ್ ಹೆಬ್ಬಾಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.







