ನಮ್ಮದು ಸನಾತನವಲ್ಲ, ಪುರಾತನ ಸಂಸ್ಕೃತಿ: ನಿಜಗುಣಾನಂದ ಸ್ವಾಮೀಜಿ

ಬೀದರ್, ಸೆ.3: ನಮ್ಮದು ಸನಾತನ ಧರ್ಮದ ಪರಂಪರೆಯ ಸಂಸ್ಕೃತಿಯಲ್ಲ. ಪುರಾತನ ಸಂಸ್ಕೃತಿ. ಜಗತ್ತಿಗೆ ಗೌರವ ಕೊಡುವ ಸಂಸ್ಕೃತಿಯಾಗಿದೆ ಎಂದು ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.
ಬುಧವಾರ ನಗರದ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ನಡೆದ, ಬಸವ ಸಂಸ್ಕೃತಿ ಅಭಿಯಾನ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಶ್ರೇಣೀಕೃತ ಸಂಸ್ಕೃತಿಯ ಬದಲಾಗಿ ಶರಣು ಶರಣಾರ್ಥಿ ಹೇಳುವ ಸಂಸ್ಕೃತಿಯನ್ನು ತಂದರು ಎಂದು ನುಡಿದರು.
ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಜನರು ಉತ್ಸವ ಮಾಡುವುದರಲ್ಲಿ ಬಹಳ ಮುಂದಿದ್ದಾರೆ. ಆದರೆ ಅದಕ್ಕಿಂತ ಮುಖ್ಯವಾದದ್ದು ಮನಸ್ಸಿನ ಪರಿವರ್ತನೆ. ಮನಸ್ಸಿನ ಪರಿವರ್ತನೆಯಾಗದಿದ್ದರೆ, ಇಂತಹ ನೂರು ಉತ್ಸವ ಮಾಡಿದರೂ ಬದಲಾವಣೆ ಆಗುವುದಿಲ್ಲ ಎಂದು ಹೇಳಿದರು.
ಎಲ್ಲ ರೀತಿಯ ಮೌಢ್ಯಗಳನ್ನು ನಿರಾಕರಿಸಿ ಬಸವ ತತ್ವದ ಹಾಗೆ ಬದುಕುತ್ತೇವೆ ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ಮನೆಯಲ್ಲಿ ಬಸವಣ್ಣನವರ ಭಾವಚಿತ್ರ ಬಿಟ್ಟು ಇನ್ನು ಯಾರದೇ ಭಾವಚಿತ್ರ ಇಟ್ಟುಕೊಳ್ಳುವುದು ಬೇಕಾಗಲಿಲ್ಲ. ಮುಂಬರುವ ಜನ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಮತ್ತು ಜಾತಿಯ ಕಾಲಂನಲ್ಲಿ ತಮ್ಮ ಉಪಜಾತಿಗಳನ್ನು ದಾಖಲಿಸಬೇಕು ಎಂದರು.
ಬಸವರಾಜ್ ಧನ್ನೂರು ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆನ್ನುವುದು ನಮ್ಮ ಬೇಡಿಕೆ. ಗಾಂಧೀಜಿ, ಅಂಬೇಡ್ಕರ್ ಜಯಂತಿಯನ್ನು ರಾಷ್ಟ್ರ ಮಟ್ಟದಲ್ಲಿ ಆಗುತ್ತವೆ. ಅದೇ ರೀತಿ ಬಸವಣ್ಣನವರ ಜಯಂತಿ ಕೂಡ ರಾಷ್ಟ್ರ ಮಟ್ಟದಲ್ಲಿ ಆಚರಣೆಯಾಗಬೇಕೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ವಿ.ಎಸ್.ಮಾಳಿ, ಲಿಂಗಾಯತ ಮಠಾಧಿಪತಿಗಳ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು, ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ಡಾ.ಗಂಗಾದೇವಿ ಮಾತಾಜಿ, ಪ್ರಭು ಚನ್ನಬಸವ ಮಹಾಸ್ವಾಮೀಜಿ, ಗುರುಬಸವ ಪಟ್ಟದೇವರು, ಡಾ.ಗಂಗಾಬಿಕೆ ಅಕ್ಕ, ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್ ಹಾಗೂ ಸುವರ್ಣಾ ಧನ್ನೂರು ಸಹಿತ ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.
ವಿಧವೆಯಲ್ಲ, ಶಿವಶರಣೆ :
ಹೆಣ್ಣು ಮುಟ್ಟಾಗಿ ಕುಳಿತಾಗ ಅವಳನ್ನು ದೂರ ಕಳಿಸುವುದು ಸನಾತನ ಸಂಸ್ಕೃತಿ. ಮನುಷ್ಯರಿಗೆ ದೇವಸ್ಥಾನ ಪ್ರವೇಶಿಸಲು ಬಿಡದ ಕಾಲದಲ್ಲಿ ದೇಹವೇ ದೇವಾಲಯ ಎಂದಿರುವುದು ಬಸವ ಸಂಸ್ಕೃತಿ. ಪತಿ ಸತ್ತಾಗ ವಿಧವೆಯಲ್ಲ, ಶಿವಶರಣೆ ಎಂದು ಹೇಳಿರುವುದು ಬಸವ ಸಂಸ್ಕೃತಿಯಾಗಿದೆ. ಇಂತಹ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಿಕೊಳ್ಳುವ ಜವಾಬ್ದಾರಿ ಇದೆ.
-ನಿಜಗುಣಾನಂದ ಸ್ವಾಮೀಜಿ







