ಔರಾದ್ (ಬಿ) ಕ್ಷೇತ್ರಕ್ಕೆ 100 ಕೋಟಿ ರೂ. ಪ್ಯಾಕೇಜ್ ಘೋಷಿಸಲಿ : ಶಾಸಕ ಪ್ರಭು ಚೌವ್ಹಾಣ್
ಬೀದರ್ : ಔರಾದ್ (ಬಿ) ಕ್ಷೇತ್ರವನ್ನು ಅತೀವೃಷ್ಟಿ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕ್ಷೇತ್ರಕ್ಕೆ 100 ಕೋಟಿ ರೂ. ಗೂ ಹೆಚ್ಚಿನ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ಆಗ್ರಹಿಸಿದರು.
ಇಂದು ಔರಾದ್ (ಬಿ) ವಿಧಾನಸಭಾ ಕ್ಷೇತ್ರದ ಅತಿವೃಷ್ಟಿಯಿಂದ ಭಾರೀ ಹಾನಿಯಾಗಿರುವ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಸರ್ಕಾರ ರೈತರಿಗೆ ಪರಿಹಾರ ಘೋಷಣೆ ಮಾಡಬೇಕು. ಬೆಳೆ ವಿಮೆ ಸೌಲಭ್ಯ ಎಲ್ಲರಿಗೂ ತಲುಪಿಸಬೇಕು. ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ, ಬ್ರಿಜ್ ಕಂ ಬ್ಯಾರೇಜ್, ಶಾಲೆ, ಅಂಗನವಾಡಿ, ಸರ್ಕಾರಿ ಕಛೇರಿಗಳ ದುರಸ್ತಿ ಮತ್ತು ಸುಧಾರಣೆಗೆ ಔರಾದ್ ಕ್ಷೇತ್ರಕ್ಕೆ 100 ಕೋಟಿ ರೂ. ಗೂ ಹೆಚ್ಚಿನ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಹೊರಂಡಿ, ಕಾಳಗಾಪೂರ್, ಸೋನಾಳ್, ಖೇಡ್, ಸಂಗಮ್, ಸಾವಳಿ, ಹೊಳಸಮುದ್ರ, ತೋರ್ಣಾ, ಬಳತ್, ಹಾಲಳ್ಳಿ, ನಿಡೋದಾ, ಹೆಡಗಾಪೂರ್, ರಕ್ಷಾಳ್, ಯನಗುಂದಾ, ತೇಗಂಪೂರ್ ಹಾಗೂ ಎಕಂಬಾ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಬೆಳೆಗೆ ಆದ ಹಾನಿ ವೀಕ್ಷಿಸಿದರು.
ಮಳೆಯಿಂದ ಹಾನಿಗೊಳಗಾದ ಎಲ್ಲ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ನಾನು ಭೇಟಿ ನೀಡಿದ ಪ್ರತಿ ಗಾಮದಲ್ಲಿ ಸುಮಾರು 500 ರಿಂದ 1,000 ಎಕರೆಯಷ್ಟು ಬೆಳೆ ಹಾನಿಯಾಗಿದೆ. ಔರಾದ್ (ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ 50 ಸಾವಿರ ಎಕರೆಯಷ್ಟು ಬೆಳೆ ಹಾನಿಯಾಗಿರುವುದಾಗಿ ಅಂದಾಜಿದೆ. ರಸ್ತೆ, ಸೇತುವೆ, ಕೆರೆ, ಬ್ರಿಜ್ ಕಂ ಬ್ಯಾರೇಜ್, ಶಾಲೆ, ಅಂಗನವಾಡಿ ಕೇಂದ್ರ ಹಾಗೂ ವಿವಿಧ ಸರ್ಕಾರಿ ಕಚೇರಿಗಳು ಹಾನಿಗೆ ಒಳಗಾಗಿವೆ ಎಂದರು.
ಈ ಸಂದರ್ಭದಲ್ಲಿ ಕಮಲನಗರ ತಹಸೀಲ್ದಾರ್ ಅಮಿತಕುಮಾರ್ ಕುಲಕರ್ಣಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತ್ ಕೌಟಗೆ, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಧೂಳಪ್ಪ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.








