ಪಂಚಪೀಠಗಳು ಬಸವಣ್ಣನವರನ್ನು ಗುರು ಎಂದು ಒಪ್ಪಿಕೊಂಡಿಲ್ಲ: ಡಾ.ಬಸವಲಿಂಗ ಪಟ್ಟದ್ದೇವರು

ಬೀದರ್ : ಪಂಚಪೀಠಗಳು ಬಸವಣ್ಣನವರಿಗೆ ಗುರು ಎಂದು ಎಂದಿಗೂ ಒಪ್ಪಿಕೊಂಡಿಲ್ಲ. ಅವರಿಗೆ ಬಸವತತ್ವಗಳಲ್ಲಿ ನಂಬಿಕೆಯು ಇಲ್ಲ. ಅವರು ಇಲ್ಲಿಯವರೆಗೆ ಬಸವಾದಿ ಶರಣರ ತತ್ವಗಳನ್ನೆ ಹೈಜಾಕ್ ಮಾಡಿಕೊಂಡು ಕಪೋಲಕಲ್ಪಿತ ಆಚಾರ್ಯರ ಹೆಸರಿನಲ್ಲಿ ಹೇಳುವುದು ರೂಢಿ ಮಾಡಿಕೊಂಡಿದ್ದಾರೆ. ಇದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಖಂಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಅವರು ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜು. 21 ಮತ್ತು 22 ರಂದು ದಾವಣಗೆರೆಯಲ್ಲಿ ನಡೆದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಪಂಚಪೀಠದ ಆಚಾರ್ಯರ ಹಾಗೂ ಕೆಲವು ರಾಜಕೀಯ ಗಣ್ಯರ ಹೇಳಿಕೆಗಳು ಖಂಡನೀಯವಾಗಿವೆ. ಈ ಹೇಳಿಕೆಗಳನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಕರ್ನಾಟಕ ಸರಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ ನಂತರ ಬಸವತತ್ವ ವಿರೋಧಿ ಶಕ್ತಿಗಳು ಒಗ್ಗಟ್ಟಾಗಿ ಆಂತರಿಕ ಮತ್ತು ಬಹಿರಂಗವಾಗಿ ಅನೇಕ ಕುತಂತ್ರಗಳು ಹೆಣೆಯುವ ಶತಪ್ರಯತ್ನಗಳು ಮಾಡುತ್ತಿವೆ. ಬಸವಣ್ಣನವರ ಹೆಸರು ಹೇಳುತ್ತಲೇ ತಮ್ಮ ಗುಪ್ತ ಅಜೆಂಡಾಗಳು ಜಾರಿಗೆಗೊಳಿಸುವ ಪ್ರಯತ್ನಗಳು ತೀವ್ರವಾಗಿ ನಡೆಯುತ್ತಿವೆ. ಅದರ ಒಂದು ಭಾಗವೇ ದಾವಣಗೆರೆಯಲ್ಲಿ ನಡೆದ ವೀರಶೈವ ಪಂಚಾಚಾರ್ಯರ ಮತ್ತು ಶಿವಾಚಾರ್ಯರ ಶೃಂಗ ಸಮ್ಮೇಳನವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಶೃಂಗ ಸಮ್ಮೇಳನದ ಸಾನಿಧ್ಯ ವಹಿಸಿದ ರಂಭಾಪುರಿಯ ಶ್ರೀ ವೀರಸೋಮೇಶ್ವರ್ ಶಿವಾಚಾರ್ಯ ಮಹಾಸ್ವಾಮಿಗಳು, ಬಸವಣ್ಣನವರ ಹೆಸರಿನಲ್ಲಿ ಕೆಲವರಿಂದ ಕಂದಕ ಸೃಷ್ಟಿಸಲಾಗುತ್ತಿದೆ ಎಂಬ ಮಾತು ಹೇಳಿದ್ದಾರೆ. ಜೊತೆಗೆ ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂಬ ಹಳೆ ಚಾಳಿ ಮತ್ತೆ ಮತ್ತೆ ಪುನರ್ ಉಚ್ಛರಿಸಿದ್ದಾರೆ. ಜೊತೆಗೆ ಪೂರ್ವ ಆಚಾರ್ಯರು ಅಸ್ಪೃಶ್ಯರ ಉದ್ದಾರ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಪೂರ್ವ ಆಚಾರ್ಯರ ಇಂತಹ ಕಾರ್ಯಗಳನ್ನು ಮರೆಯಲು ಸಾಧ್ಯವಿಲ್ಲ. ಈ ತತ್ವಗಳಿಗೆ ಮಾರುಹೋಗಿ 12ನೇ ಶತಮಾನದಲ್ಲಿ ಬಸವಾದಿ ಶರಣ, ಶರಣೆಯರು ಈ ಧರ್ಮ ಸ್ವೀಕರಿಸಿದರು ಎಂದು ಪೂಜ್ಯರು ಮಾತನಾಡಿದ್ದಾರೆ. ಪೂಜ್ಯರ ಈ ಮಾತುಗಳು ಅನೈತಿಹಾಸಿಕವಾಗಿವೆ. ಇವುಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಬಸವಾದಿ ಶರಣರು ಬಸವಪೂರ್ವದ ಯಾವುದೆ ಧರ್ಮ ಸ್ವೀಕರಿಸದೇ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂಬುದು ಐತಿಹಾಸಿಕ ಸತ್ಯವಾಗಿದೆ. ಇದಕ್ಕೆ ಬಸವಾದಿ ಶರಣರಿಂದ ಇತ್ತೀಚಿನ ಅನೇಕ ಸಂಶೋಧನೆಗಳು ಸಾಕ್ಷಿ ಆಧಾರಗಳು ನೀಡುತ್ತವೆ. ಆದರೂ ಅವರು ಸುಳ್ಳನ್ನೆ ಮತ್ತೆ ಮತ್ತೆ ಹೇಳುವ ಮೂಲಕ ಅದಕ್ಕೆ ಸತ್ಯದ ಲೇಪನ ಕೊಡುವ ಸಾವಿರ ಪ್ರಯತ್ನಗಳು ಮಾಡುತ್ತಿದ್ದಾರೆ. 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಯಾವ ಆಚಾರ್ಯರು ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಸ್ಪೃಶ್ಯರ ಉದ್ಧಾರ ಮಾಡಿದ್ದಾರೆಂದು ಶ್ರೀಗಳು ಸಿದ್ಧಪಡಿಸಬೇಕು. ಪಂಚಪೀಠಗಳು ತಮ್ಮ ಪ್ರಾಚೀನತೆ, ಶ್ರೇಷ್ಠತೆ ಎಷ್ಟು ಹೇಳಿಕೊಂಡರು ಅವರಿಗೆ ಸ್ವತಂತ್ರವಾದ ಇತಿಹಾಸ, ಸಿದ್ಧಾಂತ ಮತ್ತು ಸಾಮಾಜಿಕ ಬದ್ಧತೆ ಇಲ್ಲವೆಂಬುದು ಬೇರೆ ಹೇಳಬೇಕಾಗಿಲ್ಲ ಎಂದು ಗುಡುಗಿದ್ದಾರೆ.
ಬಸವಣ್ಣನ ಹೆಸರು ಚಾಲ್ತಿ ನಾಣ್ಯ ಇರುವ ಕಾರಣ ಅದನ್ನೆ ಬಳಸಿಕೊಂಡು ಬಸವತತ್ವಕ್ಕೆ ದ್ರೋಹ ಬಗೆಯುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂದು ಜಪ ಮಾಡುತ್ತಿರುವ ಪಂಚಪೀಠಗಳು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಏಕೆ ವಿರೋಧ ಮಾಡಿದವು? ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ಏಕೆ ತಪ್ಪಿಸಿದರು? ಕೇದಾರದ ಶ್ರೀಗಳು ಪ್ರಧಾನಮಂತ್ರಿಗಳಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಕೊಡಬಾರದೆಂದು ಏಕೆ ಫೋನ್ ಕರೆ ಮಾಡಿ ತಿಳಿಸಿದರು? ಶೃಂಗ ಸಮ್ಮೇಳನದ ಆಮಂತ್ರಣ ಪತ್ರಿಕೆ, ವೇದಿಕೆಯಲ್ಲಿ ವಿಶ್ವಗುರು ಬಸವಣ್ಣನವರ ಫೋಟೊ ಏಕೆ ಇಲ್ಲ? ಜೊತೆಗೆ ಲಿಂಗಾಯತ ಶಬ್ದ ಏಕೆ ಕೈಬಿಡಲಾಗಿದೆ? ಮುಂತಾದ ಪ್ರಶ್ನೆಗಳಿಗೆ ಪಂಚಪೀಠಗಳು ಉತ್ತರಿಸಬಹುದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಮ್ಮೇಳನದಲ್ಲಿ ವಿಜಯಾನಂದ ಕಾಶಪ್ಪನವರು ಮಾತನಾಡಿ, ಪಂಚಪೀಠಗಳಿಗೆ ಕೂಡಲಸಂಗಮಕ್ಕೆ ಆಹ್ವಾನ ನೀಡಿ, ಪಂಚಪೀಠಾಧಿಶರರು ಕೂಡಲಸಂಗಮಕ್ಕೆ ಬಂದು ಆ ಭೂಮಿ ಪಾವನ ಮಾಡಬೇಕು. ಅಲ್ಲಿ ಅಡ್ಡಪಲ್ಲಕಿ ಉತ್ಸವ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಖಂಡನೀಯವಾಗಿದೆ. ಬಸವಣ್ಣನವರ ನೆಲದಲ್ಲಿ ಬಸವತತ್ವದ ಚಿಂತನೆಗಳು ಜಾರಿಯಾಗಬೇಕೆ ವಿನಃ ಬಸವತತ್ವ ವಿರೋಧಿ ಅಡ್ಡಪಲ್ಲಕಿಗಳಂತಹ ಅಮಾನವೀಯ ಕಾರ್ಯಗಳು ನಡೆಯಬಾರದು. ಒಂದು ವೇಳೆ ವಿಜಯಾನಂದ ಕಾಶಪ್ಪನವರು ಈ ರೀತಿ ಮಾಡಿದರೆ ನಾಡಿನ ಸಮಸ್ತ ಬಸವಭಕ್ತರು, ಪ್ರಗತಿಪರ ಚಿಂತಕರು, ಸಂವಿಧಾನ ಪ್ರೇಮಿಗಳು ಇದನ್ನು ಒಗ್ಗಟ್ಟಿನಿಂದ ಪ್ರತಿಭಟಿಸುತ್ತೇವೆ. ಬಸವಾದಿ ಶರಣರ ಕುರಿತು ಅಗೌರವವಾಗಿ ಮಾತನಾಡಿದರೆ ಅದನ್ನು ಬಸವಭಕ್ತರು ಎಂದೂ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಬಸವ ಪರಂಪರೆಯ ಮಠಾಧಿಶರ ಒಗ್ಗಟ್ಟಿನಿಂದ ಪಂಚಪೀಠಗಳು ಭಯಭಿತಗೊಂಡು ಶೃಂಗ ಸಮ್ಮೇಳನ ಮಾಡಲಾಗಿದೆ ವಿನಃ ಇದರ ಹಿಂದೆ ಸಮಾಜಹಿತ ಅಥವಾ ಸಮಾಜ ಒಗ್ಗಟ್ಟಿನ ಯಾವ ಉದ್ದೇಶ ಸ್ಪಷ್ಟವಾಗಿ ಕಾಣ ಬಂದಿಲ್ಲ. ಜನಮನದಲ್ಲಿ ಬಸವಪ್ರಜ್ಞೆ ಬೆಳೆದರೆ ನಮ್ಮ ಪೀಠ ಮತ್ತು ಮಠಗಳು ಮೂಲೆ ಗುಂಪು ಆಗುತ್ತವೆ ಎಂಬ ಭಯ ಪಂಚಪೀಠಗಳಿಗೆ ಕಾಡುತ್ತಿವೆ ಎಂದು ತಿಳಿಸಿದ್ದಾರೆ.







