ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು : ಮುಹಮ್ಮದ್ ಗುಲ್ಸಿನ್

ಬೀದರ್ : ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಹಿರಿಯ ಉಪನ್ಯಾಸಕ ಡಾ.ಮುಹಮ್ಮದ್ ಗುಲ್ಸಿನ್ ಅವರು ಮನವಿ ಮಾಡಿದರು.
ಇಂದು ನಗರದ ರಾವ್ ತಾಲಿಂನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ದಾಖಲಾಗುವ ಮಕ್ಕಳಿಗಾಗಿ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗುತ್ತಿವೆ. ಅದನ್ನು ಪಾಲಕರಿಗೆ ಮನವರಿಕೆ ಮಾಡಿಕೊಡಲು ಇಂದು ಈ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಮುಖ್ಯವಾಗಿದ್ದು, ಎಲ್ಲಾ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಕನಿಷ್ಠ ಒಂದು ವಾರಕ್ಕೆ ಒಮ್ಮೆಯಾದರೂ ಶಾಲೆಗೆ ಬಂದು ಮುಖ್ಯ ಗುರುಗಳಿಗೆ ಮತ್ತು ಶಿಕ್ಷಕರಿಗೆ ಭೇಟಿ ಮಾಡಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚೆ ಮಾಡಬೇಕು. ಪ್ರತಿ ಮಗುವಿನಲ್ಲಿಯೂ ಕೂಡ ತನ್ನದೇ ಆಗಿರುವ ಪ್ರತಿಭೆ ಅಡಗಿಕೊಂಡಿದ್ದು ಅದನ್ನು ಹೊರಹಾಕಲು ಪಾಲಕರು ಅವರಿಗೆ ಪ್ರೋತ್ಸಾಹಿಸಬೇಕು ಎಂದರು.
ನಗರಸಭೆ ಸದಸ್ಯ ಅಬ್ದುಲ್ ಅಜೀಜ್, ಡಾ.ಟಿ.ಆರ್ ದೊಡ್ಡೆ, ಸಹಾಯಕ ನಿರ್ದೇಶಕ ಜಾಕೀರ್ ಹುಸೇನ್ ಮಾತನಾಡಿದರು.
ಈ ಸಂದರ್ಭದಲ್ಲಿ ಬಿ ಆರ್ ಸಿ ಧನರಾಜ್ ಗುಡುಮೆ, ಪ್ರಾಚಾರ್ಯ ಮಲ್ಲಿಕಾರ್ಜುನ ಲದ್ದೆ, ಉಪ ಪ್ರಾಂಶುಪಾಲೆ ಜಗದೇವಿ ಬೋಸ್ಲೆ, ಉಪನ್ಯಾಸಕ ಮಡೆಪ್ಪ ಜುಮ್ಮ, ಗುಂಡಪ್ಪ ಹುಡಗೆ, ತೌಸೀಫ್ ಜಹಾನ್ ಹಾಗೂ ಪಾಲಕರು, ಹಳೆ ವಿದ್ಯಾರ್ಥಿಗಳು, ಎಸ್ ಡಿ ಎಂ ಸಿ ಸದಸ್ಯರು, ಮುಖ್ಯ ಗುರು, ಶಿಕ್ಷಕರು, ಸಿ ಆರ್ ಪಿ , ಬಿ ಆರ್ ಪಿ ಮತ್ತು ಇ ಸಿ ಒ ಸೇರಿದಂತೆ ಇತರರು ಭಾಗವಹಿಸಿದ್ದರು.





