ಪಿಡಿಒಗಳು ಗ್ರಾಮೀಣ ಪ್ರದೇಶದ ಜನತೆಯ ಸಮಸ್ಯೆಗಳಿಗೆ ಸ್ಪಂದನಶೀಲರಾಗಿ ಪ್ರತಿಕ್ರಿಯಿಸಬೇಕು : ಸಿಇಓ ಡಾ.ಗಿರೀಶ್ ಬದೋಲೆ

ಬೀದರ್ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಜನರೊಂದಿಗೆ ನಿತ್ಯ ವ್ಯವಹರಿಸುವ ಇಲಾಖೆಯಾಗಿದ್ದು, ಪಿಡಿಒಗಳು ಗ್ರಾಮೀಣ ಪ್ರದೇಶದ ಜನತೆಯ ಸಮಸ್ಯೆಗಳಿಗೆ ಸ್ಪಂದನಶೀಲರಾಗಿ ಪ್ರತಿಕ್ರಿಯಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಹೇಳಿದರು.
ಇಂದು ಔರಾದ್ ತಾಲೂಕು ಪಂಚಾಯತಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಔರಾದ್ ಮತ್ತು ಕಮಲನಗರ್ ತಾಲೂಕುಗಳ ಪಿಡಿಒ ಮತ್ತು ಅನುಷ್ಠಾನ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗ್ರಾಮ ಪಂಚಾಯತಿಗಳು ಜನರ ಪಾಲ್ಗೊಳ್ಳುವಿಕೆಯ ಜನಾಡಳಿತದ ಕೇಂದ್ರಗಳಾಗಬೇಕು. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಗ್ರಾಮ ಪಂಚಾಯತಿಯ ಬಗ್ಗೆ ನಮ್ಮ ಪಂಚಾಯತ್ ನಮ್ಮ ಹೆಮ್ಮೆ ಎಂದು ಭಾವಿಸುವಂತೆ ಜನಸ್ನೇಹಿಗಳಾಗಿ ಕರ್ತವ್ಯ ನಿರ್ವಹಿಸಬೇಕು. ತೆರಿಗೆ ವಸೂಲಾತಿಯ ಸಂದರ್ಭದಲ್ಲಿ ಗ್ರಾಮೀಣ ಜನತೆಯ ಕಷ್ಟ ಸುಖಗಳನ್ನು ಅರ್ಥಮಾಡಿಕೊಂಡು ತೆರಿಗೆ ವಸೂಲಿ ಮಾಡಬೇಕು. ಮಳೆಯ ಕಾರಣದಿಂದ ಕೆಲಸ ಇಲ್ಲದೆ ಇರುವ ಬಡವರು ತೆರಿಗೆ ಕಟ್ಟಲು ಕಾಲಾವಕಾಶ ಕೇಳಿದರೆ ಅದಕ್ಕೆ ಸ್ಪಂದಿಸಬೇಕು. ಕಾರ್ಖಾನೆಗಳು, ಸಣ್ಣ ಉದ್ಯಮ, ಅಂಗಡಿ, ಹೊಟೆಲ್, ವೈನ್ ಶಾಪ್ ಅಂತಹ ವಾಣಿಜ್ಯ ಸಂಸ್ಥೆಗಳಿಂದ ತೆರಿಗೆ ವಸೂಲು ಮಾಡಬೇಕು. ವಸೂಲಾದ ತೆರಿಗೆಯಲ್ಲಿ ಗ್ರಂಥಾಲಯ ಸೆಸ್ ತುಂಬಬೇಕು ಎಂದರು.
ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಬೇಕು. ಎನ್ ಎಂ ಎಂ ಎಸ್ ಫೋಟೋಗಳು ದುರ್ಬಳಕೆ ಆಗಬಾರದು. ಕಾಮಗಾರಿಗಳ ಪೂರ್ಣಗೊಂಡ ಸರ್ಟಿಫಿಕೇಟ್ ಹಾಕಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಾಕಿ ಫಲಾನುಭವಿಗಳ ಆಯ್ಕೆ ಮತ್ತು ಜಿಪಿಎಸ್ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸಬೇಕು. ಸ್ವಚ್ಛ ಭಾರತ ಯೋಜನೆಯಡಿ ಪ್ರಗತಿಯಲ್ಲಿ ಇರುವ ವೈಯಕ್ತಿಕ ಶೌಚಾಲಯಗಳನ್ನು ಶೀಘ್ರವಾಗಿ ಮುಕ್ತಾಯಗೊಳಿಸಬೇಕು. ಬೂದು ನೀರು ನಿರ್ವಹಣಾ ಘಟಕಗಳ ಕಾಮಗಾರಿಗಳನ್ನು ಬೇಗ ಪ್ರಾರಂಭಿಸಬೇಕು. ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್ಮೆಂಟ್, ಮಲತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಕಾರ್ಯ ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಯೋಜನಾ ನಿರ್ದೇಶಕ ಸೂರ್ಯಕಾಂತ್ ಬಿರಾದಾರ್, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್ ಠಾಕೂರ್, ಆಡಳಿತ ವಿಭಾಗದ ಸಹಾಯಕ ನಿರ್ದೇಶಕ ಜಯಪ್ರಕಾಶ್ ಚೌವ್ಹಾಣ್, ಔರಾದ್ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಕಮಲನಗರ್ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತ್ರಾಯ್ ಕೌಟಗೆ, ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ನರೇಗಾ ಎಡಿಪಿಸಿ ದೀಪಕ್ ಕಡಿಮನಿ, ಪಂಚಾಯತ್ ರಾಜ್ ಇಂಜನಿಯರಿಂಗ್, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿ, ತಾಲೂಕುಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.







