ಬೀದರ್ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಹೆಸರಿಡಲು ಮನವಿ

ಬೀದರ್ : ನೂತನವಾಗಿ ಪ್ರಾರಂಭವಾದ ಬೀದರ್ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯ ಅನುಷ್ಠಾನ ಸಮಿತಿಯಿಂದ ಮನವಿ ಮಾಡಲಾಯಿತು.
ಇಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ (ಕೆ) ಸ್ನಾತ್ತಕೋತ್ತರ ಕೇಂದ್ರಕ್ಕೆ ನೂತನ ವಿಶ್ವವಿದ್ಯಾಲಯ ಎಂದು ಘೋಷಣೆಯಾಗಿದ್ದು, ನಮಗೆ ಸಂತೋಷದ ವಿಷಯವಾಗಿದೆ. ಮುಖ್ಯವಾಗಿ ಭಾರತದ ಎಲ್ಲ ವಿಶ್ವವಿದ್ಯಾಲಯಗಳ ಅಧಿನಿಯಮದ ಮೂಲ ಬಾಂಬೆ ವಿಶ್ವವಿದ್ಯಾಲಯವಾಗಿದ್ದು, ಈ ಅಧಿನಿಯಮದ ಕಾನೂನು ರೂಪಿಸಿದ್ದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಾಗಿದ್ದಾರೆ. ಹಾಗಾಗಿ ನಮ್ಮ ಜಿಲ್ಲೆಗೆ ಹೊಸದಾಗಿ ಘೋಷಣೆಯಾಗಿರುವ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಹೆಸರಿಡುವಂತೆ ಒತ್ತಾಯಿಸಲಾಗಿದೆ.
ಇದು ಜಿಲ್ಲೆಯ ಪ್ರಗತಿಪರ ಚಿಂತಕ, ಹೋರಾಟಗಾರ, ವಿದ್ಯಾರ್ಥಿಗಳ ಬೇಡಿಕೆಯಾಗಿದೆ. ಆದ ಕಾರಣ ತಾವುಗಳು ನಮ್ಮ ಮನವಿಗೆ ಸ್ಪಂದಿಸಿ ಈ ಅಧಿವೇಶನದಲ್ಲಿ ಬೀದರ್ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಅವರ ಹೆಸರು ಇಡುವಂತೆ ಪ್ರಸ್ತಾಪಿಸಬೇಕು. ಅಧಿವೇಶನ ಮುಗಿಯುವುದರ ಒಳಗಾಗಿ ಈ ನಮ್ಮ ಮನವಿಗೆ ಸ್ಪಂದಿಸದೆ ಹೋದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಈ ಸಮಿತಿಯ ಪ್ರಮುಖರಾದ ಮುಕೇಶ್ ಚಲ್ವಾ, ಭೀಮರಾವ್ ಮಾಲಗತ್ತಿ, ಪ್ರಥ್ವಿರಾಜ್ ಮುಧೋಳಕರ್, ಸಿದ್ದಾರ್ಥ್ ಕೊಂಗಟನೂರ್, ದೇವರಾಜ್ ಜಾದವ್, ಸಿದ್ದಾರ್ಥ್ ಭಾವಿದೊಡ್ಡಿ ಹಾಗೂ ನಿತೀಶ್ ಶಿಂಧೆ ಸೇರಿದಂತೆ ಇತರರು ಇದ್ದರು.







