ದೇಶದ ಆಂತರಿಕ ಭದ್ರತೆಗೆ ಪೊಲೀಸರ ಕೊಡುಗೆ ಅಪಾರ : ಸಿಇಓ ಗಿತ್ತೆ ಮಾಧವ್ ವಿಠಾಲರಾವ್

ಬೀದರ್ : ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಜೊತೆಗೆ ಆಂತರಿಕ ಭದ್ರತೆಗಾಗಿ ಪೊಲೀಸರು ಹಗಲಿರುಳು ಶ್ರಮಿಸುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ಅವರು ತಿಳಿಸಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂದಂಡೆ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಪೊಲೀಸರು ನಿಷ್ಠೆಯಿಂದ ಕೆಲಸ ಮಾಡುತ್ತಿರುವುದರಿಂದ ದೇಶದ ಜನ ನೆಮ್ಮದಿಯಿಂದ ಇದ್ದೇವೆ. ಪ್ರತಿ ವರ್ಷ ಸಾವಿರಾರು ಪೊಲೀಸರು ಕರ್ತವ್ಯದ ಸಮಯದಲ್ಲಿ ಹುತಾತ್ಮರಾಗುತ್ತಾರೆ. ಅವರ ಸ್ಮರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಪೊಲೀಸ್ ಕರ್ತವ್ಯ ನಿಷ್ಠೆಗೆ ಅವರ ಕುಟುಂಬದ ಸದಸ್ಯರ ಸಹಕಾರ ಸಾಕಷ್ಟಿದೆ. ಪೊಲೀಸ್ ಹುತಾತ್ಮರ ಮಕ್ಕಳಿಗೆ ತಮ್ಮ ಶಾಲೆಯಲ್ಲಿ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ ಅವರು ಮಾತನಾಡಿ, 1959 ರ ಅ.21ರಂದು ಲಡಾಕ್ ಪ್ರದೇಶದಲ್ಲಿ ಎಸ್ ಐ ಕರ್ಂ ಸಿಂಗ್ ನೇತೃತ್ವದ 21 ಜನ ಕೇಂದ್ರ ಪೊಲೀಸ್ ಮೀಸಲು ಪಡೆಯ ಸಿಬ್ಬಂದಿಗಳ ತಂಡ ಗಸ್ತು ತಿರುಗುವ ಸಂದರ್ಭದಲ್ಲಿ ಚೀನಾ ಸೈನ್ಯ ಏಕಾಏಕಿ ದಾಳಿ ನಡೆಸಿತ್ತು. ಈ ಸಮಯದಲ್ಲಿ ವೀರಾವೇಶದಿಂದ ಹೋರಾಡಿ ನಮ್ಮ 10 ಜನ ಪೊಲೀಸ್ ಸಿಬ್ಬಂದಿಗಳು ಮಡಿದರು. ಹಾಗೆಯೇ 11 ಜನ ಒತ್ತೆಯಾಳಾದರು. ಅವರ ತ್ಯಾಗ, ಬಲಿದಾನದ ಸಂಕೇತವಾಗಿ ಪೊಲೀಸ್ ಹುತಾತ್ಮರ ದಿನಾಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಕಳೆದ ಒಂದು ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ವಾಚಿಸಿದರು.
ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸೇರಿದಂತೆ ಇತರೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಗಣ್ಯರಿಂದ ಹುತಾತ್ಮರ ಸ್ಮಾರಕಕ್ಕೆ ಹೂದಂಡೆ ಸಮರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ, ಬೀದರ್ ಡಿವೈಎಸ್ಪಿ ದೂದಪೀರ್ ಮುಲ್ಲಾ, ಹುಮನಾಬಾದ್ ಡಿವೈಎಸ್ಪಿ ಮಡಿವಾಳಪ್ಪಾ, ಡಿಆರ್ಡಿಎಸ್ಪಿ ಶರಣಪ್ಪ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ನಗರದ ಗಣ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






