ಕೌಟುಂಬಿಕ ಸಮಸ್ಯೆಯಲ್ಲಿ ಕಾಣದ ಕೈಗಳ ರಾಜಕೀಯ: ಪುತ್ರನ ವಿರುದ್ಧದ ವಂಚನೆ ಆರೋಪಕ್ಕೆ ಶಾಸಕ ಪ್ರಭು ಚವ್ಹಾಣ್ ಪ್ರತಿಕ್ರಿಯೆ
"ಮಹಿಳಾ ಆಯೋಗದಿಂದ ನೋಟಿಸ್ ಬಂದಲ್ಲಿ ಉತ್ತರಿಸಲಾಗುವುದು"

ಬೀದರ್ : ಮಹಾರಾಷ್ಟ್ರ ಮೂಲದ ಯುವತಿಯೊಬ್ಬರು ನನ್ನ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವುದು ವಿರೋಧಿಗಳ ರಾಜಕೀಯ ಷಡ್ಯಂತ್ರವಾಗಿದೆ. ಮಹಿಳಾ ಆಯೋಗದಿಂದ ನೋಟಿಸ್ ಬಂದಲ್ಲಿ ಸಾಕ್ಷಿ ಸಮೇತವಾಗಿ ಉತ್ತರಿಸಲಾಗುವುದು ಎಂದು ಶಾಸಕ ಪ್ರಭು ಚವ್ಹಾಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನನ್ನ ಮಗನೊಂದಿಗೆ ವರ್ಷದ ಹಿಂದೆ ನಿಶ್ಚಿತಾರ್ಥವಾಗಿರುವುದು ನಿಜ. ಆದರೆ, ನಂತರ ಯುವತಿಯ ಪೋಷಕರು ಮತ್ತು ಸಮಾಜದ ಪಂಚರ ಸಮ್ಮುಖದಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಸಂಬಂಧ ಮುರಿದು ಬಿದ್ದಿದೆ. ಯಾವ ಕಾರಣಕ್ಕಾಗಿ ಸಂಬಂಧ ಮುರಿದು ಬಿತ್ತು ಎನ್ನುವುದನ್ನು ಯುವತಿಯ ಭವಿಷ್ಯದ ಹಿತದೃಷ್ಟಿಯಿಂದ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವುದಿಲ್ಲ. ಕಾರಣಗಳು ಮತ್ತು ಸಾಕ್ಷ್ಯವನ್ನು ಈಗಾಗಲೇ ಯುವತಿಯ ಪಾಲಕರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.
ನಾಲ್ಕು ಗೋಡೆಗಳ ಮಧ್ಯ ಬಗೆಹರಿಯಬೇಕಿದ್ದ ಕೌಟುಂಬಿಕ ಸಮಸ್ಯೆಯನ್ನು ವ್ಯವಸ್ಥಿತವಾಗಿ ಷಡ್ಯಂತ್ರದ ರೂಪ ನೀಡಿ ಆ ಕುಟುಂಬವನ್ನು ಬಳಕೆ ಮಾಡಿಕೊಂಡು ಸಮಸ್ಯೆ ಸೃಷ್ಟಿಸುತ್ತಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ. ನಮ್ಮ ಕುಟುಂಬದ ಗೌರವ ಹಾಗೂ ನನ್ನ ರಾಜಕೀಯ ಜೀವನಕ್ಕೆ ಧಕ್ಕೆ ತರುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ತೇಜೋವಧೆ ಮಾಡಬೇಕು. ನನ್ನನ್ನು ಮಾನಸಿಕವಾಗಿ ಕುಗ್ಗಿಸಬೇಕು ಎಂಬ ಉದ್ದೇಶದಿಂದ ನನ್ನ ವಿರೋಧಿ ತಂಡವು ಸುಮಾರು 10 ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಿದೆ. ಜು.6ರಂದು ಕ್ಷೇತ್ರದ ಮಹಾಜನತೆ ನನ್ನ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಇದನ್ನು ಅರಿತ ವಿರೋಧಿಗಳು ಯುವತಿಯ ಮನೆಗೆ ಹೋಗಿ ಅವರೆಲ್ಲ ನನ್ನ ಮನೆಗೆ ಬಂದು ಗಲಾಟೆ ಮಾಡುವಂತೆ ಮತ್ತು ದೂರು ನೀಡುವಂತೆ ಪ್ರಚೋದನೆ ನೀಡಿದ್ದರು ಎಂದು ದೂರಿದ್ದಾರೆ.
ರಾಜಕೀಯ ಏಳಿಗೆ ಸಹಿಸದ ವಿರೋಧಿಗಳು ದುರುದ್ದೇಶದಿಂದ ನನ್ನ ಕೌಟುಂಬಿಕ ವಿಚಾರಗಳನ್ನು ಸಾರ್ವಜನಿಕಗೊಳಿಸುವ ಪ್ರಯತ್ನ ಪದೆ ಪದೇ ನಡೆಸುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯತ್ನಿಸಿದ್ದರು. ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅಡ್ಡಿಪಡಿಸಲು ಹರಸಾಹಸ ಮಾಡಿದ್ದರು. ಈಗ ಮಹಿಳಾ ಆಯೋಗಕ್ಕೆ ದೂರು ನೀಡುವ ಮೂಲಕ ಮತ್ತೊಮ್ಮೆ ಕಿರುಕುಳ ನೀಡುವ ಪ್ರಯತ್ನ ಮಾಡಿದ್ದಾರೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದೇ ಈ ರೀತಿಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳಾ ಆಯೋಗದಿಂದ ನೋಟಿಸ್ ಬಂದಲ್ಲಿ ಅದಕ್ಕೆ ಸಾಕ್ಷಿ ಸಮೇತ ಮಾಹಿತಿಯನ್ನು ಆಯೋಗಕ್ಕೆ ಒದಗಿಸಲಾಗುತ್ತದೆ. ಯುವತಿಯ ಮತ್ತು ಅವರ ಹಿಂದಿರುವ ಕಾಣದ ಕೈಗಳ ಎಲ್ಲ ಆರೋಪಗಳಿಗೂ ಕಾನೂನಾತ್ಮಕವಾಗಿಯೇ ಉತ್ತರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.







