Bidar | ಜಿಲ್ಲಾ ಕೆಡಿಪಿ ಸಭೆಯಲ್ಲಿ ಗಲಾಟೆ : ಹುಮನಾಬಾದ್ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿ

ಹುಮನಾಬಾದ್: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರ ನಡುವೆ ಗಲಾಟೆ ನಡೆದ ಕಾರಣ ಹುಮನಾಬಾದ್ ತಾಲೂಕಿನಾದ್ಯಂತ 163 (1) ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಹುಮನಾಬಾದ್ ತಹಸೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.
ಸೋಮವಾರ ಬೀದರ್ ನಗರದ ಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹುಮನಾಬಾದ್ ತಾಲೂಕಿನ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ನಡುವೆ ನಡೆದ ಜಗಳದಿಂದಾಗಿ ಹುಮನಾಬಾದ್ ತಾಲೂಕಿನಾದ್ಯಂತ ಅಶಾಂತಿ ಸೃಷ್ಟಿಯಾಗುವ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಆದ್ದರಿಂದ ಹುಮನಾಬಾದ್ ತಾಲೂಕಿನಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ತಾಲೂಕಿನಾದ್ಯಂತ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ಕಲಂ 163 (1)ರ ಅನ್ವಯ ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ಮುಂದಿನ ಆದೇಶದವರಿಗೆ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶದಂತೆ ಹುಮನಾಬಾದ್ ತಾಲೂಕಿನಾದ್ಯಂತ ಐದು ಜನ ಗುಂಪಾಗಿ ತಿರುಗುವಂತಿಲ್ಲ. ಮಾನವ ಜೀವಕ್ಕೆ ಅಪಾಯಕಾರಿಯಾದ ಆಯುಧಗಳು ಹಿಡಿದು ಓಡಾಡುವುದನ್ನು ನಿಷೇಧೀಸಲಾಗಿದೆ. ಯಾವುದೇ ವ್ಯಕ್ತಿಯ ವಿರುದ್ಧ ಘೋಷಣೆ ಮತ್ತು ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ. ರಾಜಕೀಯವಾಗಿ ಗುಂಪು ಚರ್ಚೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.





