ಭಾಲ್ಕಿಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಶೀಘ್ರ ಕ್ರಮ: ಈಶ್ವರ್ ಖಂಡ್ರೆ ಭರವಸೆ

ಭಾಲ್ಕಿ: ನಗರದಲ್ಲಿ ಪತ್ರಿಕಾ ಭವನ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭಾಲ್ಕಿ ತಾಲೂಕು ಘಟಕದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಒದಗಿಸಿ ಪತ್ರಿಕಾ ಭವನ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ದೇಶದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಟ್ಟಿರುವ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರು ನಿರ್ಭೀತಿಯಿಂದ ನೈಜ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಓದುಗರ ವಿಶ್ವಾಸ ಗಳಿಸಬಹುದು. ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಮಾಧ್ಯಮದವರು ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ನವೀಕರಿಸಿಕೊಳ್ಳುವುದು ಅಗತ್ಯವಾಗಿದೆ. ಸರ್ಕಾರವು ಜನಕಲ್ಯಾಣಕ್ಕಾಗಿ ಜಾರಿಗೊಳಿಸುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವುದು ಪತ್ರಕರ್ತರ ಹೊಣೆಗಾರಿಕೆಯಾಗಿದೆ. ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ ಹಾಗೂ ದರೋಡೆಗಳಂತಹ ಘಟನೆಗಳು ನಡೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ದೇಶದ ಪ್ರಗತಿಗಾಗಿ ಮಾಧ್ಯಮದವರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಸಕಾರಾತ್ಮಕ ಸುದ್ದಿಗಳನ್ನು ಬಿತ್ತರಿಸುವುದು ಅವಶ್ಯಕವಾಗಿದೆ. ಭಾಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನಗಳ ಪತ್ರಿಕಾ ಭವನ ನಿರ್ಮಾಣದ ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಅಶೋಕ್ ರಾಜೋಳೆ, ತಾಲೂಕು ಅಧ್ಯಕ್ಷ ಜೈರಾಜ್ ಪಾತ್ರೆ, ಕಾರ್ಯದರ್ಶಿ ಸಂತೋಷ್ ಬಿ.ಜಿ. ಪಾಟೀಲ್, ಚಂದ್ರಕಾಂತ್ ಪಾಟೀಲ್, ಪತ್ರಕರ್ತರಾದ ಚಂದ್ರಶೇಖರ್ ಎಮ್ಮೆ, ಜೈರಾಜ್ ದಾಬಶೆಟ್ಟಿ, ರಾಜೇಶ್ ಮುಗಟೆ, ದಿಲೀಪ್ ಶೇರಿಕಾರ್, ಭದ್ರೇಶ್ ಸ್ವಾಮಿ, ಸಾಬೇರ್ ಪಟೇಲ್, ಸಂತೋಷ್ ಹಡಪದ್, ಡಾ. ಇಂದ್ರಜೀತ್ ಪಂಚಾಳ್, ನರೇಂದ್ರ ಸೋಮಶೆಟ್ಟಿ, ಮಾಣಿಕ್ ಮರಕಲೆ, ವಿರೇಶಕುಮಾರ್ ಸ್ವಾಮಿ, ಬಸವರಾಜ್ ವಂಕೆ, ದಿಲೀಪ್ ಸುಂಟೆ ಹಾಗೂ ಶೇಖರ್ ವಂಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.






