ಅ.23 ರಂದು ಎಸ್‌ಐಆರ್ ವಿರುದ್ಧ ಪ್ರತಿಭಟನೆ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ನಿರ್ಣಯ

ಬೀದರ್ : ಅ.23 ರಂದು ನಗರದಲ್ಲಿ ಎಸ್‌ಐಆರ್ ವಿರುದ್ಧ ಜನತೆ ಎನ್ನುವ ಶೀರ್ಷಿಕೆ ಅಡಿಯಲ್ಲಿ ಎಸ್ಐಆರ್ ವಿರೋಧಿ ಒಕ್ಕೂಟ, ಸಂಯುಕ್ತ ಕಿಸಾನ್ ಮೋರ್ಚಾ, ಜಾತ್ಯಾತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಲಾಗಿದೆ.
ಈ ಕುರಿತು ನಗರದ ಸ್ಟಾರ್ ಲಾಡ್ಜ್‌ನಲ್ಲಿ ಹಿರಿಯ ಹೋರಾಟಗಾರ, ನ್ಯಾಯವಾದಿ ಬಾಬುರಾವ್ ಹೊನ್ನಾ ಅವರ ಅಧ್ಯಕ್ಷತೆಯಲ್ಲಿ ಎಸ್ಐಆರ್ ವಿರೋಧಿ ಒಕ್ಕೂಟ, ಸಂಯುಕ್ತ ಕಿಸಾನ್ ಮೋರ್ಚಾ, ಜಾತ್ಯಾತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅ.23 ರಂದು ಅಂಬೇಡ್ಕರ್ ವೃತ್ತದ ರಸ್ತೆಯ ಬದಿ ಪ್ರತಿಭಟನಾ ಸಭೆ ಹಮ್ಮಿಕೊಂಡು, ಪ್ರತಿಭಟನೆ ಸಭೆಯ ನಂತರ ತಿರಂಗಾ ಮೆರವಣಿಗೆ ನಡೆಸಲಾಗುವುದು. ಹರಳಯ್ಯ ವೃತ್ತ, ಛತ್ರಪತಿ ಶಿವಾಜಿ ವೃತ್ತ, ಬಸವೇಶ್ವರ್ ವೃತ್ತ, ಭಗತ್ ಸಿಂಗ್ ವೃತ್ತದ ಮೂಲಕ ಸಾಗಿ ಡಾ. ಅಂಬೇಡ್ಕರ್ ವೃತ್ತದಲ್ಲಿ ತಿರಂಗಾ ಮೆರವಣಿಗೆ ಮುಕ್ತಾಯಗೊಳ್ಳಲಿದೆ.
ರಾಷ್ಟ್ರದ ಕರೆಯ ಮೇರೆಗೆ ಬೀದರ್ ಜಿಲ್ಲೆಯಲ್ಲಿ ಎಲ್ಲಾ ಸಂಘಟನೆಯವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪ್ರಜಾತಂತ್ರ ಮರು ಸ್ಥಾಪನೆಗಾಗಿ ಜನತೆಯ ನಡಿಗೆ ಹಾಗೂ ದೇಶಾದ್ಯಂತ ಜಂತರ್ ಮಂತರ್ ಪ್ರತಿಭಟನೆ ಸಭೆಗಳು ಜರುಗಲಿವೆ. ಹರ್ ಹಾಥ್ ಮೇ ತಿರಂಗಾ, ಹರ್ ಗಲಿಮೆ ಜಂತರ್ ಮಂತರ್ ಕಾರ್ಯಕ್ರಮ ಜರುಗಲಿದೆ. ಈ ದೇಶದ ಭವಿಷ್ಯದ ಯುವಜನರ ಕೈಯಲ್ಲಿದೆ. ಆದ್ದರಿಂದ ನಮ್ಮ ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ಸಾಮೂಹಿಕ ಶಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಅವರೊಂದಿಗೆ ಕೈಜೋಡಿಸಿ, ಪ್ರಜಾತಂತ್ರ ಉಳಿಸಬೇಕು. ಎಸ್ಐಆರ್ ರದ್ಧಾಗಬೇಕು ಎಂದು ನೀರ್ಣಯಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ವಕೀಲ ಸರ್ಫರಾಜ್ ಹಾಸ್ಮಿ, ಡಾ.ಮಕ್ಸೂದ್ ಚಂದಾ, ಜಗದೀಶ್ವರ್ ಬಿರಾದಾರ್, ಓಂಪ್ರಕಾಶ್ ರೊಟ್ಟೆ, ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಝಾಮುದ್ದೀನ್, ಮಹೇಶ್ ಗೋರನಾಳಕರ್, ವಿಠಲದಾಸ್ ಪ್ಯಾಗೆ, ಸಯ್ಯದ್ ಮುಬಷೀರ್ ಅಲಿ ಅಬು, ಮುಹಮ್ಮದ್ ಫಯಾಜುದ್ದೀನ್, ಸಂದೀಪ್ ಮುಕಿಂದೆ ಹಾಗೂ ಶಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.






