ಬೀದರ್ | ಹುಲಸೂರ್ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಬೀದರ್ : ಹುಲಸೂರ್ ತಾಲೂಕು ಎಂದು ಘೋಷಣೆಯಾಗಿ ವರ್ಷಗಳೇ ಕಳೆದರೂ ಇನ್ನು ಗ್ರಾಮ ಪಂಚಾಯತ್ ಆಗಿಯೇ ಉಳಿದಿದೆ. ಇದನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿ ಬುಧವಾರ ಹುಲಸೂರ್ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಹುಲಸೂರ್ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ಘೋಷಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಮೇಲ್ದರ್ಜೆಯಾಗದೆ ಉಳಿದಿರುವ ಈ ಹುಲಸೂರ್ ಗ್ರಾಮ ಪಂಚಾಯತ್ ಈ ಸರಕಾರದ ಅವಧಿಯಲ್ಲೂ ಕೂಡ ಹಾಗೆಯೇ ಮುಂದುವರೆದಿದೆ. ಹುಮನಾಬಾದ್ ತಾಲೂಕಿನ ರಾಜೇಶ್ವರ್ ಗ್ರಾಮ ಸೇರಿ ಹಲವು ಗ್ರಾಮಗಳು ಪಟ್ಟಣ ಪಂಚಾಯತ್ ಹಾಗೂ ಹಲವು ಪುರಸಭೆಗಳು ನಗರಸಭೆಯಾಗಿ ಘೋಷಣೆಯಾಗಿವೆ. ಆದರೆ ಹುಲಸೂರ್ ತಾಲೂಕು ಕೇಂದ್ರ ಇದ್ದರು ಕೂಡ ಇದನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೀದರ್ ಪ್ರೊಬೇಷನರಿ ಜಿಲ್ಲಾಧಿಕಾರಿ ರಮ್ಯಾ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಗ್ರಾಮದ ಯುವಕರು, ಉದ್ಯಮಿಗಳು ಮುಖಂಡರು ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.





