ಬಸ್ ನಿಲ್ಲಿಸುವಂತೆ ಆಗ್ರಹಿಸಿ ಬೀದರ್-ಕಲ್ಬುರ್ಗಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ

ಬೀದರ್ : ಬಸ್ ನಿಲ್ಲಿಸುವಂತೆ ಆಗ್ರಹಿಸಿ ಹಳ್ಳಿಖೇಡ್ (ಕೆ) ವಾಡಿಯಲ್ಲಿ ವಿದ್ಯಾರ್ಥಿಗಳು ಬೀದರ್-ಕಲ್ಬುರ್ಗಿ ಮುಖ್ಯ ರಸ್ತೆ ತಡೆದು ಬುಧವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಿಂದಾಗಿ ಬೀದರ್-ಕಲ್ಬುರ್ಗಿ ಮುಖ್ಯ ರಸ್ತೆಯು ಸುಮಾರು 2 ಗಂಟೆಗಳ ಕಾಲ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಇದರಿಂದಾಗಿ ಪ್ರಯಾಣಿಕರಿಗೆ ಸಮಸ್ಯೆಯಾಯಿತು.
ಕಲ್ಬುರ್ಗಿಯಿಂದ ಬೀದರ್ ಗೆ ಹೋಗುವ ಹಾಗೂ ಬೀದರ್ ನಿಂದ ಕಲ್ಬುರ್ಗಿ ಕಡೆಗೆ ತೆರಳುವ ಯಾವುದೇ ಬಸ್ಸುಗಳು ಹಳ್ಳಿಖೇಡ್ (ಕೆ) ವಾಡಿ ಗ್ರಾಮದಲ್ಲಿ ನಿಲ್ಲಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸೇರಿದಂತೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ತುಂಬಾನೇ ತೊಂದರೆಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಲಾಯಿತು.
ಸ್ಥಳಕ್ಕೆ ಆಗಮಮಿಸಿದ ಕೆ ಕೆ ಆರ್ ಟಿ ಸಿ ಅಧಿಕಾರಿಗಳು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಪಟ್ಟರು. ಕೊನೆಗೆ ಹಳ್ಳಿಖೇಡ್ (ಕೆ) ವಾಡಿ ಗ್ರಾಮದಲ್ಲಿ ಬಸ್ಸು ನಿಲ್ಲಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ಸು ಪಡೆದರು.
ವಾಹನಗಳಿಂದ ಟ್ರಾಫಿಕ್ ಸಂಭವಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಹರಸಾಹಸ ಪಟ್ಟರು. ಕೊನೆಯಲ್ಲಿ ನಿಧಾನವಾಗಿ ವಾಹನಗಳು ಸುಗಮವಾಗಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.






