ಎಸ್‌ಐಆರ್ ವಿರೋಧಿಸಿ ಬಸವಕಲ್ಯಾಣದಲ್ಲಿ ಪ್ರತಿಭಟನೆ

ಬಸವಕಲ್ಯಾಣ: ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ಜನತೆ ಹಾಗೂ ಎಸ್‌ಐಆರ್ ವಿರೋಧಿ ಒಕ್ಕೂಟದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕ ಸಂದೀಪ್ ಮುಕಿಂದೆ ಮಾತನಾಡಿ, ಕಳೆದ 10ರಂದು ವಿವಿಧ ಯುವ ಸಂಘಟನೆಗಳು ದೇಶದ ರಾಜಧಾನಿ ದೆಹಲಿಯಲ್ಲಿ ಎಸ್‌ಐಆರ್ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದವು. ಆದರೆ, ಅಂದು ಸರ್ಕಾರ ದೆಹಲಿಯಲ್ಲಿ ಸಾವಿರಾರು ಪೊಲೀಸರು ಹಾಗೂ ಅರೆಸೈನಿಕ ಪಡೆಗಳನ್ನು ನಿಯೋಜಿಸಿ ಪ್ರತಿಭಟನೆ ತಡೆಯಲು ಪ್ರಯತ್ನಿಸಿತು. ದೆಹಲಿ ಮೆಟ್ರೋ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ದೆಹಲಿಗೆ ಬರಬೇಕಿದ್ದ ನೂರಾರು ರೈಲುಗಳನ್ನು ಮಾರ್ಗಮಧ್ಯೆಯೇ ತಡೆಯಲಾಗಿತ್ತು. ಜಂತರ್ ಮಂತರ್‌ನಲ್ಲಿನ ಪ್ರತಿಭಟನಾ ಸ್ಥಳಕ್ಕೂ ನಿಷೇಧ ಹೇರಿ ದರ್ಪ ಮೆರೆಯಲಾಯಿತು ಎಂದು ಆರೋಪಿಸಿದರು.
ಇದಕ್ಕೆ ಪ್ರತಿಯಾಗಿ ನಾಗರಿಕ ಸಮಾಜದ ಸಂಘಟನೆಗಳು ಇಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿವೆ. ಈ ಕರೆಗೆ ಸ್ಪಂದಿಸಿ ಬಸವಕಲ್ಯಾಣದಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಗದೀಶ್ವರ್ ಬಿರಾದಾರ್ ಮಾತನಾಡಿ, ಎಸ್‌ಐಆರ್ ಹೆಸರಿನಲ್ಲಿ ವಯಸ್ಕರಿಗೆ ಮತದಾನದ ಹಕ್ಕು ನೀಡಿರುವ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಜನರನ್ನು ಮತದಾನದ ಹಕ್ಕಿನಿಂದ ವಂಚಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಇದು ಯಾವುದೋ ಒಂದು ಸಮುದಾಯಕ್ಕೆ ಮಾತ್ರ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸಿ ಸಮಾಜ ನಿರಾಳವಾಗಿದೆ. ಆದರೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಬಳಿಕ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಹೋರಾಟಗಾರ ಇಕ್ರಮೊದ್ದಿನ್ ಖಾದಿವಾಲೆ ಮಾತನಾಡಿ, ಮತದಾನದ ಹಕ್ಕಿನಿಂದ ವಂಚಿಸುವುದು ಅಸಂವಿಧಾನಿಕ ಕ್ರಮವಾಗಿದೆ. ಇದರ ವಿರುದ್ಧದ ಇಂದಿನ ಹೋರಾಟವು ಕ್ರಾಂತಿಯ ಕಿಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ಸಂಘಟನೆಯ ಮುಖಂಡ ರಿಯಾಜ್ ಪಟೇಲ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯ ಮೂಲಕ ದೇಶದ ಪ್ರಜೆಗಳೊಂದಿಗೆ ಮೋಸದ ಆಟ ಆಡಲಾಗುತ್ತಿದೆ. ಈ ಮೂಲಕ ದೇಶದ ಜನರಿಗೆ ದ್ರೋಹ ಎಸಗಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸುರೇಶ್ ಮೋರೆ, ರೈತ ಮುಖಂಡ ಖಾನಸಾಬ್, ಕನ್ನಡ ಹೋರಾಟಗಾರ ಮಹಾಂತೇಶ್ ಗೋರಕರ್, ದಲಿತ ಮುಖಂಡ ಯುವರಾಜ್ ಬೇಂಡೆ, ಆಕಾಶ್ ಕಿನ್ನೆಕರ್, ಯೂತ್ ಕಾಂಗ್ರೆಸ್‌ನ ಮನೋಜ್ ಖೆಲೆ, ಅಜಾರ್ ಹಾಗೂ ಸಯ್ಯದ್ ಪಾಶಾ ಸೇರಿದಂತೆ ಇತರರು ಉಪಸ್ಥಿತರಿದ್ದರು.






