ಸಿಜೆಐ ಅವರಿಗೆ ಶೂ ಎಸೆದ ವಕೀಲನಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹಿಸಿ ಹುಮನಾಬಾದ್‌ನಲ್ಲಿ ಪ್ರತಿಭಟನೆ

ಬೀದರ್ : ಸಿಜೆಐ ಬಿ.ಆರ್ ಗವಾಯಿ ಅವರಿಗೆ ಶೂ ಎಸೆದಿರುವ ವಕೀಲ, ಉತ್ತರ ಪ್ರದೇಶದಲ್ಲಿ ಹರಿ ಓಂ ವಾಲ್ಮೀಕಿ ಕೊಲೆ ಮಾಡಿರುವ ಕಿಡಿಗೇಡಿಗಳು ಮತ್ತು ಸಂವಿಧಾನ ವಿರೋಧಿ ಹೇಳಿಕೆ ನೀಡಿ ಅವಮಾನ ಮಾಡಿರುವ ಅನೀಲ್ ಮಿಶ್ರಾ ಅವರನ್ನು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಇಂದು ಹುಮನಾಬಾದ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಹುಮನಾಬಾದ್ ನ ಅಂಬೇಡ್ಕರ್ ವೃತ್ತದಲ್ಲಿ ಭೀಮ್ ಆರ್ಮಿ ಹಾಗೂ ದಲಿತ ಪ್ಯಾಂಥರ್ ಸಂಘಟನೆಯಿಂದ ಪ್ರತಿಭಟನೆ ನಡೆಸಿ, ಸಿಜೆಐ ಬಿ.ಆರ್ ಗವಾಯಿ ಅವರಿಗೆ ಶೂ ಎಸೆದಿರುವ ವಕೀಲ, ಉತ್ತರ ಪ್ರದೇಶದಲ್ಲಿ ಹರಿ ಓಂ ವಾಲ್ಮೀಕಿ ಕೊಲೆ ಮಾಡಿರುವ ಕಿಡಿಗೇಡಿಗಳು ಮತ್ತು ಸಂವಿಧಾನ ವಿರೋಧಿ ಹೇಳಿಕೆ ನೀಡಿ ಅವಮಾನ ಮಾಡಿರುವ ಅನೀಲ್ ಮಿಶ್ರಾ ಅವರ ವಿರುದ್ಧ ಘೋಷಣೆಗಳು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಲಾಯಿತು.
ಹುಮನಾಬಾದ್ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಭಾರತೀಯ ಸಂವಿಧಾನದ ಅಡಿಯಲ್ಲಿರುವ ಸರ್ವೋಚ್ಚ ನ್ಯಾಯಲಯವು ಭಾರತದ ಪ್ರತಿಯೊಂದು ನ್ಯಾಯಲಯದ ಅಂತಿಮ ತೀರ್ಪು ನೀಡುತ್ತದೆ. ಈ ನ್ಯಾಯಲದ ನ್ಯಾಯಧೀಶರು ಭಾರತದ ಅತಿ ಶ್ರೇಷ್ಠ ವ್ಯಕ್ತಿಯಲ್ಲಿ ಒಬ್ಬರಾಗಿರುತ್ತಾರೆ. ಈ ನ್ಯಾಯಲಯದ ನ್ಯಾಯಧೀಶರಿಗೆ ಅವಮಾನ ಮಾಡಿದರೆ ಭಾರತದ ದೇಶಕ್ಕೆ, ಭಾರತದ ಕಾನೂನಿಗೆ ಹಾಗೂ ಭಾರತದ ಸಂವಿಧಾನಕ್ಕೆ ಅವಮಾನ ಮಾಡಿದಂತಿರುತ್ತದೆ. ಆದರೆ, ಈಗ ಅದೇ ನ್ಯಾಯಲಯದಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಓರ್ವ ವಕೀಲ ಸಿಜೆಐ ಅವರ ಮೇಲೆ ಶೂ ಎಸೆಯಲು ಯತ್ನಿಸಿರುವುದು ಖಂಡನೀಯ ಎಂದು ದೂರಲಾಗಿದೆ.
ದಲಿತರು ಕೇವಲ ಅವರ ಗುಲಾಮರಾಗಿ, ಅವರ ಕೆಳಭಾಗದಲ್ಲಿ ಮಾತ್ರ ಇರಬೇಕು. ಆದರೆ ಈಗ ಅವರಿಗಿಂತ ಮೇಲೆ ಸ್ಥಾನ ಪಡೆದಿರುವ ಬಿ.ಆರ್ ಗವಾಯಿ ಅವರನ್ನು ಇವರಿಂದ ಸಹಿಸಲು ಆಗುತ್ತಿಲ್ಲ. ಈ ರೀತಿಯ ಕೆಟ್ಟ ಮನಸ್ಥಿತಿ ಇರುವ, ಈ ದೇಶದ ಕಾನೂನು ವ್ಯವಸ್ಥೆ ಹಾಳು ಮಾಡುತ್ತಿರುವ ಈ ವ್ಯಕ್ತಿಯನ್ನು ದೇಶದ್ರೋಹಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅವನಿಗೆ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾದೆ.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲ್ಲೂಕು ಅಧ್ಯಕ್ಷ ಮನೋಜಕುಮಾರ್ ಜಾನವಿರ್, ಉಪಾಧ್ಯಕ್ಷ ಶೇಕ್ ಫಿರ್ದೋಸ್, ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ, ಉಪಾಧ್ಯಕ್ಷ ಸಿದ್ದಾರ್ಥ್ ಜಾನವಿರ್, ಎಂ. ಡಿ ಬಾಬಾ ಪಟೇಲ್, ಲಕ್ಷ್ಮಣರಾವ್ ಜಾನವಿರ್, ತೈಯಬ್ ನಂದನ್, ರಾಹುಲ್ ಬೋತಗಿ, ಯುವರಾಜ್ ಐಹೊಳ್ಳಿ ಹಾಗೂ ಭೀಮರೆಡ್ಡಿ ಸಿಂಧನಕೇರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







