ವಿದೇಶಿ ಶಕ್ತಿಗಳ ಮಾತು ಕೇಳಿ ರಾಹುಲ್ ಗಾಂಧಿ ಅವರು ಮತಗಳ್ಳತನದ ಸುಳ್ಳು ಆರೋಪ ಮಾಡುತ್ತಿದ್ದಾರೆ : ಮಾಜಿ ಸಚಿವ ಭಗವಂತ್ ಖೂಬಾ

ಬೀದರ್ : ವಿದೇಶಿ ಶಕ್ತಿಗಳ ಮಾತು ಕೇಳಿ ಮತಗಳ್ಳತನ ನಡೆದಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ಅವರು ಆಗ್ರಹಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನಕ್ಕೆ ಬೇಕಾಗುವಷ್ಟು ಸೀಟನ್ನು ಗೆಲ್ಲಲಾಗದೆ ಒದ್ದಾಡುತ್ತಾ ಸುಳ್ಳು ಆರೋಪ ಮಾಡುತ್ತಿದೆ. ರಾಹುಲ್ ಗಾಂಧಿ ಕೂಡಾ ತನ್ನ ಆಸ್ತಿತ್ವ ಏನೂ ಇಲ್ಲ ಎಂಬುದು ಮನಗಂಡು ಖೋಟಾ ಸಿಕ್ಕಾದಂತೆ ವರ್ತಿಸುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಮತದಾರರಿಗೆ ಹಣದ ಆಮಿಷ ತೋರಿಸುವುದು ಕಾಂಗ್ರೇಸ್‌ನ ಹಳೆಯ ಚಾಳಿಯಾಗಿದೆ. ಕಾಂಗ್ರೇಸ್ ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಸರಿಯಾಗಿರುತ್ತವೆ. ಸೋತಾಗ ಮಾತ್ರ ಕೆಡುತ್ತವೆ. ಇದು ಹೇಗೆ ಎಂದು ಪ್ರಶ್ನಿಸಿದ ಅವರು, ಆರೋಪ ಮಾಡುತ್ತಿರುವುದು ನಿಜ ಎಂದು ಚುನಾವಣಾ ಆಯೋಗದ ಮುಂದೆ ಪ್ರಮಾಣ ಮಾಡಿ ಎಂದು ರಾಹುಲ್ ಗಾಂಧಿ ಅವರಿಗೆ ಆಯೋಗ ಹೇಳಿದಾಗ, ನಾನು ಸಂಸತ್‌ನಲ್ಲಿ ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದು ಹೇಳಿ ಪ್ರಮಾಣ ವಚನವೆಂಬ ಪದಕ್ಕೇ ಅವರು ಅವಮಾನ ಮಾಡಿದ್ದಾರೆ ಎಂದು ಗುಡುಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಘಟಕ ಅಧ್ಯಕ್ಷ ಶಶಿ ಹೊಸಳ್ಳಿ, ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕ ರಾಜಶೇಖರ್ ನಾಗಮೂರ್ತಿ, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿವಾಸ್ ಚೌಧರಿ ಹಾಗೂ ಬಸವರಾಜ್ ಪವಾರ ಉಪಸ್ಥಿತರಿದ್ದರು.







