ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಯಲಿ : ನ್ಯಾ. ರಾಜಶೇಖರ್ ಹರಸೂರ್

ಭಾಲ್ಕಿ : ವಿದ್ಯಾರ್ಥಿಗಳು ಗಿಡ ನೆಡುವುದರಿಂದ ಬಾಲ್ಯದಿಂದಲೇ ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಕಾಳಜಿ ಹೆಚ್ಚಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಗಿಡ ನೆಡುವುದರ ಜೊತೆಗೆ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಭಾಲ್ಕಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ್ ಹರಸೂರ್ ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯಾವಾದಿಗಳ ಸಂಘ ಮತ್ತು ಚನ್ನಬಸವೇಶ್ವರ್ ಗುರುಕುಲ ಸಹಯೋಗದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಮತ್ತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಆವರಣ ಮತ್ತು ಮನೆಯ ಪರಿಸರದಲ್ಲಿ ಗಿಡವನ್ನು ನೆಟ್ಟರಷ್ಟೇ ವಿದ್ಯಾರ್ಥಿಗಳ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ, ನೆಟ್ಟ ಗಿಡಕ್ಕೆ ಕಾಲಕಾಲಕ್ಕೆ ಪೋಷಣೆ ಮಾಡಬೇಕು. ಗಿಡಕ್ಕೆ ನಿತ್ಯ ನೀರು ಹಾಕಿ, ಗೊಬ್ಬರ ನೀಡಿ ಮಗುವಿನಂತೆ ಆರೈಕೆ ಮಾಡಿದಾಗ ಮಾತ್ರ ಮುಂದೆ ಗಿಡಗಳು ಮರವಾಗಿ ಬೆಳೆಯುತ್ತವೆ ಎಂದರು.
ಪ್ರಕೃತಿಯಲ್ಲಿನ ಗಿಡ ಮರಗಳನ್ನು ಕಾಳಜಿ ವಹಿಸಿ ರಕ್ಷಿಸಿದರೆ ಮನುಷ್ಯ, ಪ್ರಾಣಿ ಹಾಗೂ ಪಕ್ಷಿ ಸಂಕುಲಕ್ಕೆ ಶುದ್ಧ, ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಪ್ರಾಕೃತಿಕ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಪ್ರಕೃತಿ ನಾಶದಿಂದ ಜೀವ ಸಂಕುಲಕ್ಕೆ ಆಪತ್ತು ಎದುರಾಗಿದೆ. ಸಸಿ ನೆಡುವ ಕಾರ್ಯಕ್ರಮಗಳು ಕೇವಲ ಪರಿಸರ ದಿನಾಚರಣೆಗೆ, ದಾಖಲೆಗಾಗಿ ಸೀಮಿತವಾಗದೆ ವರ್ಷವಿಡೀ ನಮ್ಮ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಲಾಲನೆ ಪಾಲನೆ ಮಾಡಬೇಕು. ಗಿಡಮರಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಇಂದಿನಗಳಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಕಾನೂನು ಅರಿವು ಹೊಂದುವುದು ಅವಶ್ಯಕವಾಗಿದೆ. ಕಾನೂನಿನ ಅರಿವಿನಿಂದ ಹಕ್ಕುಗಳು ರಕ್ಷಣೆ ಆಗುತ್ತವೆ. ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಲು ಸಹಾಯ ಮಾಡುತ್ತದೆ. ಹಾಗೆಯೇ ಅಪರಾಧಗಳಿಂದ ದೂರವಿರಲು ಸಹಾಯಕವಾಗುತ್ತವೆ ಎಂದು ಸಲಹೆ ನೀಡಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟ ದೇವರು ಮಾತನಾಡಿ, ಪ್ರಕೃತಿ ಮತ್ತು ಪರಿಸರದಲ್ಲಿ ಅದ್ಭುತ ಶಕ್ತಿ ಅಡಗಿದೆ. ಬಸವಾದಿ ಶರಣರ ಅನುಭಾವದಿಂದ ರಚನೆಗೊಂಡ ವಚನ ಸಾಹಿತ್ಯ ಪ್ರಕೃತಿ, ಪರಿಸರದಲ್ಲಿ ಉದಯಸಿದೆ. ಪ್ರಕೃತಿ ಮಡಿಲಿನಲ್ಲಿ ಬುದ್ಧನಿಗೆ ಜ್ಞಾನೋದಯ ಆಗಿತ್ತು ಎಂಬುದನ್ನು ಇತಿಹಾಸದಿಂದ ತಿಳಿದು ಬರುತ್ತದೆ. ಹಾಗಾಗಿ ಅಂತಹ ಪ್ರಕೃತಿ ಮತ್ತು ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನುಡಿದರು.
ಈ ವೇಳೆ ಸಿವಿಲ್ ನ್ಯಾಯಧೀಶ ದೇಶಭೂಷಣ ಕೌಜಲಗಿ ಬಸವ ಗುರುವಿನ ಪೂಜೆ ನೇರವೇರಿಸಿದರು. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಸಚೀನ್ ಪಾಟೀಲ್ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಈ ಸಂಧರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕೋಸಂಬೆ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹೇಶ್ ರಾಚೋಟೆ, ಉಪಾಧ್ಯಕ್ಷ ಮಕರಂದ್ ಮಾನಕಾರಿ, ಸಹ ಕಾರ್ಯದರ್ಶಿ ನೀಲಕಂಠ್ ಬಿರಾದಾರ್ ಹಾಗೂ ಆಡಳಿತಾಧಿಕಾರಿ ಮೋಹನ್ ರೆಡ್ಡಿ ಸೇರಿದಂತೆ ಮುಂತಾದವರು ಇದ್ದರು.






