ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಬಸವೇಶ್ವರರ ಹೆಸರಿಡಲು ಮನವಿ

ಬೀದರ್ : ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಮಹಾತ್ಮ ಬಸವೇಶ್ವರ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕು ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದ ಮನವಿ ಪತ್ರದಲ್ಲಿ, ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಮಹಾತ್ಮ ಬಸವೇಶ್ವರ ಅವರ ಹೆಸರಿಡಬೇಕು ಎನ್ನುವುದು ನಮ್ಮ ಹಲವಾರು ವರ್ಷಗಳ ಬೇಡಿಕೆಯಾಗಿದೆ. ಈ ಕುರಿತು ಕೂಡಲ ಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷರಾಗಿದ್ದ ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರು ಡಾ.ಮಾತೆ ಮಹಾದೇವಿ ಮಾತಾಜಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ಸೇರಿದಂತೆ ಹಲವಾರು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ 1995-96ರ ಅವಧಿಯಲ್ಲಿ ತೀವ್ರವಾದ ಹೋರಾಟ ನಡೆದಿತ್ತು ಎಂದು ಉಲ್ಲೇಖಿಸಲಾಗಿದೆ.
ಅವಾಗಿನ ಮುಖ್ಯಮಂತ್ರಿ ದೇವೇಗೌಡರು ಮತ್ತು ಉಪಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ಹೆಸರು ಸೂಕ್ತವಾಗಿದೆ ಎಂದು ವಿಧಾನ ಸಭೆಯಲ್ಲಿ ಘೋಷಣೆ ಮಾಡಿ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದ್ದರಿಂದ ಆ ಹೋರಾಟ ಕೈ ಬಿಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಹಲವಾರು ಒತ್ತಡಗಳು ಉಂಟಾಗಿ ಅದು ಇಲ್ಲಿಯವರೆಗೆ ನೆನೆಗುದಿಗೆ ಬಿದ್ದಿದೆ ಎಂದು ತಿಳಿಸಲಾಗಿದೆ.
ಈಗಾಗಲೇ ವಿಜಯಪುರದ ಮಹಿಳಾ ವಿ.ವಿ. ಗೆ ಅಕ್ಕಮಹಾದೇವಿ ಅವರ ಹೆಸರಿಡಲಾಗಿದೆ. ಬಸವಣ್ಣನ ರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ. ಬಸವೇಶ್ವರ್ ಅವರ ಭಾವಚಿತ್ರಗಳನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಆದೇಶ ಮಾಡಲಾಗಿದೆ. ಮುಖ್ಯಮಂತ್ರಿಗಳೇ ತಾವು ಬಸವ ಜಯಂತಿ ದಿನವೇ ತಾವು ಪ್ರಮಾಣ ವಚನ ಸ್ವೀಕಾರ ಮಾಡಿದ್ದೀರಿ. ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ಬಸವೇಶ್ವರ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಗುರುಬಸವಣ್ಣನವರ ಕಾಯಕ ಮತ್ತು ದಾಸೋಹ ಸಿದ್ಧಾಂತದಲ್ಲಿ ಅಪಾರ ನಂಬಿಕೆಯುಳ್ಳ ತಾವು ಗುಲ್ಬರ್ಗಾ ವಿ.ವಿ. ಗೆ ಬಸವೇಶ್ವರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವ ಮೂಲಕ ಮತ್ತೊಮ್ಮೆ ತಾವು ಬಸವ ತತ್ವದ ಅಭಿಮಾನಿಗಳೆಂಬುದನ್ನು ಸಾಬೀತುಪಡಿಸುವುದಕ್ಕಾಗಿ ಎಂದು ಮನವಿ ಮಾಡಲಾಗಿದೆ.
ಮುಖ್ಯಮಂತ್ರಿಗಳು ಕೂಡಲೇ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಮಹಾತ್ಮ ಬಸವೇಶ್ವರ ಹೆಸರಿಡಲು ರಾಷ್ಟ್ರೀಯ ಬಸವ ದಳ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ, ಲಿಂಗಾಯತ ಧರ್ಮ ಮಹಾಸಭಾ ಸೇರಿದಂತೆ ಎಲ್ಲಾ ಸಂಘಟನೆಗಳ ಬೇಡಿಕೆ ಇದೆ ಎಂದು ತಿಳಿಸಲಾಗಿದೆ.
ಕಲ್ಯಾಣ ಕರ್ನಾಟಕದ ಯಾವುದೇ ಸರಕಾರಿ ಸಂಸ್ಥೆಗಳಿಗೆ ಮತ್ತು ಬೀದರ್ ವಿಶ್ವವಿದ್ಯಾಲಯಕ್ಕೆ ಹೆಸರಿಡುವಾಗ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಇದ್ದ 770 ಅಮರ ಗಣಂಗಳಲ್ಲಿ ಯಾರಾದರೂ ಒಬ್ಬ ಶರಣರ ಹೆಸರಿಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ್ ಪಾಟೀಲ್ ಅತಿವಾಳ್, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ರವಿಕಾಂತ್ ಬಿರಾದಾರ್ ಹಾಗೂ ಶಂಕರಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.







