ಔರಾದ್ ನ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ ಶಿಕ್ಷಕ, ಶಿಕ್ಷಣ ಇಲಾಖೆ ಸಿಬ್ಬಂದಿಗಳನ್ನು ಅಮಾನತುಗೊಳಿಸಲು ಮನವಿ

ಬೀದರ್ : ಅ.7 ರಂದು ಜಿಲ್ಲೆಯ ಔರಾದ್ ತಾಲೂಕಿನಲ್ಲಿ ನಡೆದ ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ದಲಿತ ಸೇನೆ ಸಂಘಟನೆಯು ಮನವಿ ಮಾಡಿದೆ.
ಇಂದು ಕಲಬುರ್ಗಿಯ ಶಾಲಾ ಶಿಕ್ಷಣ ಇಲಾಖೆಯ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅ.7 ರಂದು ಔರಾದ್ ತಾಲೂಕಿನಲ್ಲಿ ಆರೆಸ್ಸೆಸ್ ಪಥನಂಚಲನ ನಡೆಸಲಾಗಿತ್ತು. ಈ ಪಥ ಸಂಚಲನದಲ್ಲಿ ತಾಲೂಕಿನ ಕೆಲವು ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿರುವುದು ದೃಢಪಟ್ಟಿದೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ತಮಗೆ ಸಲ್ಲಿಸಿರುವ ಮನವಿಪತ್ರದೊಂದಿಗೆ ಆ ದಾಖಲೆ ಕೂಡ ಲಗತ್ತಿಸಲಾಗಿದೆ ಎಂದು ತಿಳಿಸಲಾಗಿದೆ.
ಸರ್ಕಾರಿ ನೌಕರರು ತಮ್ಮ ಸೇವಾ ನಿಯಮಗಳ ಪ್ರಕಾರ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಸಂಘಟನೆಯ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಈ ನಿಯಮಗಳನ್ನು ಉಲ್ಲಂಘಿಸಿ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿರುವುದು ರಾಜ್ಯ ಸರ್ಕಾರದ ಸೇವಾ ನಿಬಂಧನೆಗಳಿಗೆ ವಿರುದ್ಧವಾಗಿದೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಔರಾದ್ ನ ಅದರ್ಶ ವಿದ್ಯಾಲಯದ ಸಹ ಶಿಕ್ಷಕ ಮಹಾದೇವ್ ಚಿಟಗಿರೆ, ಔರಾದ್ ನ BIERP ಸಿಬ್ಬಂದಿ ಶಾಲಿವಾನ್ ಉದಗಿರಿ, ಏಕಾಂಬಾ ಗ್ರಾಮದ CRC ಪ್ರಕಾಶ್ ಬರದಾಪುರ್ ಅವರು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿರುವ ನೌಕರರಾಗಿದ್ದಾರೆ. ಇವರನ್ನು ವಿಚಾರಣೆ ನಡೆಸಿ, ತಕ್ಷಣವೇ ಅಮಾನತು ಮಾಡುವ ಮೂಲಕ ಸೂಕ್ತ ಶಿಸ್ತಿನ ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ದಲಿತ ಸೇನೆಯ ತಾಲೂಕು ಅಧ್ಯಕ್ಷ ಸುನಿಲ್ ಮಿತ್ರಾ, ಉಪಾಧ್ಯಕ್ಷ ಉಮಾಕಾಂತ್ ಸೋನೆ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರತ್ನದೀಪ್ ಕಸ್ತೂರೆ, ಡಿವಿಪಿ ಯ ಅಧ್ಯಕ್ಷ ಆನಂದ್ ಕಾಂಬಳೆ ಇದ್ದರು.







